ನಾ ನೋಡಿದ ಸಿನೆಮಾ: ಜೂನಿ
ಕನ್ನಡದಲ್ಲಿ ಹಲವು ಆಳ್ತನ (multiple personality) ಬಗೆಗಿನ ಚಿತ್ರಗಳು ಬಂದಿವೆಯ? ಬಂದಿದ್ದರೂ ಒಂದೋ ಎರಡೋ ಇರಬಹುದು. ಕೇಳಿದಾಕ್ಶಣ ನೆನಪಾಗುವಂತ ಸಿನೆಮಾಗಳೆಂದರೆ ಮಾನಸ ಸರೋವರ ಹಾಗೂ ಶರಪಂಜರ. ಆಪ್ತಮಿತ್ರ ಸಿನೆಮಾವನ್ನು ಕೆಲವರು ಈ ವರ‍್ಗಕ್ಕೆ ಸೇರಿಸಬಹುದಾದರೂ ಅದು ಅಶ್ಟರ ಮಟ್ಟಿಗೆ ಹೊಂದುವುದಿಲ್ಲ ಎಂದೇ ಹೇಳಬಹುದು. ಇಂಗ್ಲಿಶ್ ಹಾಗೂ ಇತರ ನುಡಿಗಳಲ್ಲಿ ಈ ವಿಶಯ ಒಳಗೊಂಡ ಹಲವು ಸಿನೆಮಾಗಳು ಬಂದಿವೆ. ಪೈಟ್ ಕ್ಲಬ್, ಹೆರಿಡಿಟರಿ, ಸ್ಪ್ಲಿಟ್ ರೀತಿಯ ಸಿನೆಮಾಗಳು ಈ ವರ‍್ಗಕ್ಕೆ ಸೇರುತ್ತವೆ. ಈ ರೀತಿಯ ಸಿನೆಮಾಗಳು ಕನ್ನಡದಲ್ಲಿ, ಅದರಲ್ಲೂ ಇತ್ತೀಚೆಗೆ ಬಂದಿವೆಯ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ, ಅದಕ್ಕೆ ಉತ್ತರ ನೀಡಲು ಬಂದಿದೆ ಜೂನಿ.
ತನಗಿಶ್ಟದ ಕೆಲಸವಾದ ಅಡುಗೆ ಮಾಡುವುದನ್ನೇ ಒಂದು ವ್ಯಾಪಾರವಾಗಿ ಮಾಡಲು ಕೆಪೆ ಒಂದನ್ನು ತೆರೆದು, ಆ ವ್ಯಾಪಾರದಲ್ಲಿ ಗೆಲುವು ಕಾಣಲು ಹೊರಟಿರುವ ನಾಯಕ. ಪರಸ್ಪರ ಹೊಂದಾಣಿಕೆ ಕಡಿಮೆ ಇದ್ದರೂ, ಮಗನ ಆಸೆಗೆ ನೀರೆದು ಮಗನ ಜೊತೆ ನಿಂತ ಹೆತ್ತವರು. ಹೀಗೆ ದಿನ ಕಳೆಯುತ್ತಿರುವಾಗ ಕೆಪೆಗೆ ಬರುವ ನಾಯಕಿ, ಆಕೆಯ ಮೇಲಾಗುವ ಒಲವು, ಮುಂದೊಮ್ಮೆ ಆಕೆಯನ್ನು ಬೇಟಿಮಾಡಲು ಹೋದ ನಾಯಕನಿಗೆ ಕಾದಿರುವ ಅಚ್ಚರಿ, ಆ ಅಚ್ಚರಿ ಏನು? ಅದನ್ನ ತಿಳಿದ ನಾಯಕನ ಮುಂದಿನ ನಡೆಯೇನು? ಇದೆಲ್ಲವನ್ನು ತಿಳಿಯ ಬೇಕಾದರೆ ಸಿನೆಮಾದಲ್ಲಿದೆ ಉತ್ತರ. ಇದು ನಿಜಗಟನೆ ಆದಾರಿತ ಚಿತ್ರ ಎನ್ನಲಾಗಿದೆ ಕೂಡ.
ಇತ್ತೀಚೆಗೆ ಸಹಜ ನಟನೆಗೆ ಒತ್ತು ಕೊಡುವ ಕಲಾವಿದರು ಹೆಚ್ಚುತ್ತಿದ್ದು, ದಿಯಾ ಸಿನೆಮಾದ ಮೂಲಕ ಹೆಸರಾದ ಪ್ರುತ್ವಿ ಅಂಬಾರ‍್ ಅವರು ಈ ಸಿನಿಮಾದ ನಾಯಕನಾಗಿ ನಟಿಸಿದ್ದು, ತಮ್ಮ ಸರಳ ಹಾಗೂ ಸಹಜ ನಟನೆಯನ್ನು ಇಲ್ಲೂ ಮುಂದುವರೆಸುದ್ದಾರೆ. ರುಶಿಕಾ ನಾಯಕ್ ಅವರು ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅವಿನಾಶ್, ಸುದಾರಾಣಿ, ವಿನಯಾ ಪ್ರಸಾದ್ ಹಾಗೂ ಇನ್ನಿತರರು ನಟಿಸಿದ್ದಾರೆ.
ತೆರೆಯ ಹಿಂದಿನ ಕೆಲಸಗಾರರ ವಿಶಯಕ್ಕೆ ಬಂದರೆ ವೈಬವ್ ಮಹಾದೇವ್ ಅವರ ಕತೆ, ಚಿತ್ರಕತೆ ಹಾಗೂ ನಿರ‍್ದೇಶನವಿದೆ. ನಕುಲ್ ಅಬ್ಯಂಕರ‍್ ಅವರು ಸಂಗೀತ ನೀಡಿದ್ದು ಮೋಹನ್ ಕುಮಾರ‍್ ಹಾಗೂ ಶ್ರೇಯಸ್ ವೈ ಎಸ್ ಅವರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ. ಈ ರೀತಿಯ ಸಿನೆಮಾಗಳು ಕನ್ನಡದಲ್ಲಿ ಅಪರೂಪವಾಗಿದ್ದು, ಸಿನೆಮಾತಂಡದ ಕೆಲಸಕ್ಕೆ ಮೆಚ್ಚುಗೆ ಸಲ್ಲಿಸಬೇಕು. ಕನ್ನಡದಲ್ಲೂ ಸಹ ಬಗೆ ಬಗೆಯ ಕತಾ ಹಂದರ ಹೊಂದಿರುವ ಸಿನೆಮಾಗಳು ಬರುತ್ತಿರುವುದು ನಲಿವಿನ ಸಂಗತಿ. ನೋಡ ಬಯಸುವವರಿಗೆ, ಪ್ರೈಮ್ ವಿಡಿಯೋದಲ್ಲಿ ಈ ಸಿನೆಮಾ ಲಬ್ಯವಿದೆ.
(ಚಿತ್ರಸೆಲೆ: in.bookmyshow.com)
ಇತ್ತೀಚಿನ ಅನಿಸಿಕೆಗಳು