ಕಾಣದ ಜೀವಿಯು ಬಂದು ತಲ್ಲಣಿಸುವುದು ಜಗವು ನೋಡಾ…
ಕಂಡು ಕಂಡುದನೆಲ್ಲವ ಕೊಂಡು
ಅಟ್ಟಹಾಸದಿ ಮೆರೆವ ಜನಕೆ
ಕಾಣದ ಜೀವಿಯು ಬಂದು
ತಲ್ಲಣಿಸುವುದು ಜಗವು ನೋಡಾ
ಗುಹೇಶ್ವರಾ
ಈ ಮೇಲಿನ ವಚನ ಅಲ್ಲಮಪ್ರಬುವಿನ ೧೨ ನೇ ಶತಮಾನದ ಕೊಡುಗೆ. ಅಂದು ಅವರು ಯಾವ ದ್ರುಶ್ಟಿಕೋನ ಇಟ್ಟುಕೊಂಡು ಈ ವಚನ ಹಾಡಿದರೋ ಅವರ ಮನದೊಳಗಿನ ಬಾವಗಳ ತಲ್ಲಣ ನಮಗರಿಯದಾದರೂ, ಅವರು ಸುಮಾರು ಎಂಟುನೂರು ವರ‍್ಶಗಳ ಹಿಂದೆ ರಚಿಸಿದ ಈ ವಚನ ಪ್ರಸ್ತುತ ಜಗತ್ತಿನಲ್ಲಿ ಸತ್ಯವಾಗಿ ಪರಿಣಮಿಸುತ್ತಿರುವುದರಿಂದ ಈ ವಚನಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿದೆ.
ಮನುಶ್ಯನ ಅಹಂಕಾರ ಎಲ್ಲೆ ಮೀರಿದರೆ ಅದು ಅವನ ಅವನತಿಯ ಪ್ರಾರಂಬವೆಂದೇ ಅರ‍್ತ. ಏಕೆಂದರೆ ಜ್ಯೋತಿ ತಾನು ಆರುವ ಮುನ್ನ ಜೋರಾಗಿ ಉರಿಯುತ್ತದೆ. ಮನುಶ್ಯ ತನ್ನ ಹಣಬಲ ಜನಬಲದಿಂದ ಮನುಶ್ಯತ್ವ ಮರೆತು ರಾಕ್ಶಸ ಬಾವದಿಂದ ವರ‍್ತಿಸುತ್ತಾನೆ ಎಂಬುದು ಕೂಡಾ ಈ ವಚನದ ಸೂಚ್ಯ ಬಾವವಾಗಿದೆ. ಮನುಶ್ಯನಿಗೆ ಹಣದ ಮದ ತಲೆಗೆ ಹತ್ತಿದಾಗ ಕಂಡ ಕಂಡದ್ದನ್ನೆಲ್ಲ ಕೊಂಡು ಬೀಗುತ್ತಾನೆ. ಇತರರಲ್ಲಿ ಇಲ್ಲದ ವಸ್ತುವನ್ನು ನಾನು ನನ್ನ ಹಣ ಬಲದಿಂದ ಕೊಂಡುಕೊಂಡೆ ಎಂಬ ಅಹಂಬಾವದಿಂದ ಆತನ ಅಟ್ಟಹಾಸವೂ ಎಲ್ಲೆ ಮೀರುತ್ತದೆ. ಈ ಅಹಂ ಅಡಗಿಸಲು ಈ ಜಗದಲ್ಲಿ ಕಾಣದ ಜೀವಿಯೊಂದು ಬಂದು ತಲ್ಲಣಿಸುವುದರ ಜೊತೆಗೆ, ನಮ್ಮ ಜೀವನವನ್ನು ಅಸ್ತವ್ಯಸ್ತ ಮಾಡಿ ನಮಗೆ ಗೋರಿ ಕಟ್ಟಿ ಕಣ್ಮರೆಯಾಗುತ್ತದೆ ಎಂಬ ಅಲ್ಲಮ ಪ್ರಬುಗಳ ವಚನದ ಬಾವಾರ‍್ತ ಈಗ ಒಂದೆರಡು ವರ‍್ಶಗಳ ಹಿಂದೆ ಸತ್ಯವಾಗಿದ್ದನ್ನು ಕಂಡಿದ್ದೇವೆ. ಅತಿಯಾದ ಕುಂಬದ್ರೋಣ ಮಳೆ ಸುರಿದ ಕೊಡಗು ಮುಂತಾದ ಮಲೆನಾಡ ಬಾಗದಲ್ಲಿ ಗುಡ್ಡ ಬೆಟ್ಟಗಳು ಕುಸಿದು ಮನೆ ಮಟ, ಆಸ್ತಿಪಾಸ್ತಿಗಳೆಲ್ಲ ಮಣ್ಲಲ್ಲಿ ಮಣ್ಣಾಗಿ ಹೋದಾಗ ಆ ಬಾಗದ ಬಡವ ಶ್ರೀಮಂತರೆಲ್ಲರೂ ಸರ‍್ಕಾರಿ ಗಂಜಿ ಕೇಂದ್ರಗಳಲ್ಲಿ ಒಟ್ಟಾಗಿ ಆಶ್ರಯ ಪಡೆದು, ಒಂದೇ ಕಡೆ ಕುಳಿತು ಗಂಜಿ ಸೇವಿಸುವ ಕಾಲದಲ್ಲಿ ಶ್ರೀಮಂತನ ಹಣದ ಪ್ರಬಾವ ಎಲ್ಲಿ ಮಾಯವಾಗಿತ್ತು? ವಿದಿಯಾಟದಲ್ಲಿ ಜನರು ತಲ್ಲಣಿಸಿ ಹೋಗಿ ಅಹಂಕಾರವೆಲ್ಲ ಮಣ್ಣು ಪಾಲಾಗಿ ಮಾನವೀಯತೆ ಮಾತ್ರ ಅಲ್ಲಿ ಪ್ರದಾನ ಪಾತ್ರವಹಿಸಿತ್ತು. ಇದು ವಿದಿಯ ಆಟದ ಕರಾಳ ಸ್ವರೂಪವೆ ಸರಿ!
ಮನುಶ್ಯ ತನ್ನ ಹಣಬಲ ತೋಳ್ಬಲದಿಂದ ಇಡಿ ಜಗತ್ತನ್ನೆ ಕೊಂಡುಕೊಳ್ಳಬಲ್ಲೆ ಎಂಬ ಅಹಂಕಾರ ಎಲ್ಲೆ ಮೀರಿ ಅಟ್ಟಹಾಸ ಗೈಯುತ್ತಿರುವಾಗ ಅಲ್ಲಮಪ್ರಬುಗಳು ಹೇಳುವಂತೆ ‘ಕೊರೊನಾ’ ಸಾಂಕ್ರಾಮಿಕ ರೋಗದ ಸಂದರ‍್ಬದಲ್ಲಿ ಕಾಣದ ರೋಗಾಣುವೊಂದು ಬಂದು ನಮ್ಮನ್ನೆಲ್ಲ ತಲ್ಲಣಿಸಿ ಅಯೋಮಯಗೊಳಿಸದ್ದಲ್ಲದೇ, ಬದುಕನ್ನು ಮೂರಾಬಟ್ಟೆ ಮಾಡಿ ಹಾಕಿತು. ಕೈಯಲ್ಲಿ, ಬ್ಯಾಂಕಲ್ಲಿ ಹಣವಿದೆ, ಚಿನ್ನವಿದೆ. ಶೇರುಗಳು ಮ್ಯೂಚುಯಲ್ ಪಂಡ್, ಬ್ಯಾಂಕ್ ಡೆಪಾಸಿಟ್ ಎಲ್ಲವೂ ಇದ್ದರೂ ಬಂದ ರೋಗಕ್ಕೆ ಮದ್ದು ಪಡೆಯಲು ಸಾದ್ಯವಾಗದೆ ಒದ್ದಾಡಿದ್ದು ಇಂದಿಗೂ ಕಣ್ಣಿಗೆ ಕಟ್ಟುತ್ತದೆ. ನಿತ್ಯದ ಅಗತ್ಯವಸ್ತು, ಔಶದಿ ಪಡೆಯಲು ಉದ್ದುದ್ದ ಸರತಿ ಸಾಲುಗಳಲ್ಲಿ ಗಂಟೆಗಟ್ಟಲೆ ನಿಂತು ಪಡೆದದ್ದು ಮರೆಯಲು ಸಾದ್ಯವಿಲ್ಲ. ಇದು ಅಲ್ಲಮಪ್ರಬುಗಳು ಹೇಳಿದಂತೆ ಕಾಣದ ಜೀವಿಯೊಂದು ಬಂದು ತಲ್ಲಣಗೊಳಿಸಿದ್ದಲ್ಲದೆ, ಹಣದ ಮದವೇರಿದವರಿಗೆ ಮದವಿಳಿಸಿ ಪಾಟ ಕಲಿಸಿದೆ.
ಕೊರೊನಾ ಕಾಯಿಲೆಯಿಂದ ಬಳಲಿದವರು ಆಸ್ಪತ್ರೆಗಳಲ್ಲಿ ಬಂದುಬಳಗದಿಂದ ದೂರವಾಗಿ ಅನಾತರಂತೆ ಮೂಕ ವೇದನೆ ಅನುಬವಿಸಿದರು. ಮನುಶ್ಯನ ಅಹಂಕಾರವೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿತ್ತು. ಇಂತಹ ಅನುಬವ ಕೊರೊನಾ ಸಂದರ‍್ಬದಲ್ಲಿ ನಮಗೂ, ನಿಮಗೂ ಎಲ್ಲರಿಗೂ ಆಗಿದೆ. ಸದ್ಯಕ್ಕೆ ಅಂತಹ ಪರಿಸ್ತಿತಿ ಇಲ್ಲವಾದರೂ ಆ ಸಂದರ‍್ಬದ ನೋವು, ಸಂಕಟ, ರೋದನೆಯನ್ನು ನಾವೆಂದೂ ಮರೆತು ಬದುಕಬಾರದು. ಹಾಗಾಗಿ ಅಲ್ಲಮ ಪ್ರಬುಗಳ ಈ ವಚನ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎಂಬುದು ನಿಸ್ಸಂಶಯ.
(ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು