ನಾ ನೋಡಿದ ಸಿನೆಮಾ: ಯುವ
ನಾಯಕ, ಅಪ್ಪ-ಅಮ್ಮ ಹಾಗೂ ಅಕ್ಕ ಇರುವ ಪುಟ್ಟ ಕುಟುಂಬ. ಮಂಗಳೂರಿನಲ್ಲಿ ಓದುತ್ತಿರುವ ನಾಯಕ. ಅಪ್ಪ ಮಗನ ನಡುವೆ ಏನೋ ವೈಮನಸ್ಯ. ಕೋಪಕ್ಕೆ ಕಿರೀಟದಂತಿರುವ ನಾಯಕ. ಕಾಲೇಜಿನಲ್ಲಿ ನಾಯಕನಿಗೊಂದು ಲವ್ ಸ್ಟೋರಿ. ಕಾಲೇಜಿನಲ್ಲಿ ನಡೆದ ಒಂದು ಗಟನೆಯಿಂದ ಅಪ್ಪ ಮಗನ ನಡುವಿನ ನಂಟು ಇನ್ನೂ ಕೆಟ್ಟು, ಅಕ್ಕನ ಮದುವೆಗೂ ಸಹ ಹೋಗಲಾರದ ಪರಿಸ್ತಿತಿಯನ್ನು ತಂದುಕೊಳ್ಳುವ ನಾಯಕ. ನಂತರ ಓದು ಮುಗಿದಮೇಲೆ ಮನೆಗೆ ಬರುವ ಮಗನಿಗೆ ಕಾದಿರುವ ಕುಟುಂಬದ ಕೆಟ್ಟ ಪರಿಸ್ತಿತಿ. ಪರಿಸ್ತಿಯ ಒತ್ತಡಕ್ಕೆ ಮಣಿದು ಪುಡ್ ಡಿಲೆವರಿ ಕೆಲಸಕ್ಕೆ ಸೇರುವ ಮಗ. ಏನು ಆ ಕೆಟ್ಟ ಪರಿಸ್ತಿತಿ, ಅದರಿಂದ ಈ ಕುಟುಂಬ ಹೊರ ಬರುತ್ತದೆಯೇ? ಅಪ್ಪ ಮಗನಿಗೂ ಇರುವ ವೈಮನಸ್ಸಿಗೆ ಕಾರಣ ಏನು? ಇವೆಲ್ಲದಕ್ಕೂ ಉತ್ತರ ಬೇಕೆಂದರೆ ಸಿನೆಮಾ ನೋಡಬೇಕು.
ಸಂತೋಶ್ ಆನಂದ್ ರಾಮ್ ಸಿನೆಮಾ ಎಂದಮೇಲೆ ಮೇಕಿಂಗ್ ಚೆನ್ನಾಗಿರುತ್ತದೆ ಎನ್ನುವ ಮಾತಿಗೆ ತಕ್ಕಂತೆ ಸಿನೆಮಾ ಮೇಕಿಂಗ್ ಚೆನ್ನಾಗಿದೆ. ಡ್ಯಾನ್ಸ್ ಹಾಗೂ ಪೈಟ್ ದ್ರುಶ್ಯಗಳನ್ನು ನೋಡುಗರ ಮುಂದೆ ಅಚ್ಚುಕಟ್ಟಾಗಿ ಇಡಲಾಗಿದೆ. ಇನ್ನು ಡೈಲಾಗ್ ಗಳ ವಿಶಯಕ್ಕೆ ಬಂದರೆ ನಾಯಕನ ಬಾಯಿಂದ ಹೇಳಿಸಲೇ ಬೇಕು ಎಂದು ಪಟ್ಟು ಬಿದ್ದು ಬರೆಯಲಾದ ಹಲವಾರು ಉದ್ದುದ್ದ ಡೈಲಾಗ್ ಗಳು, ಕೇಳುಗರಿಗೆ ಬರು ಬರುತ್ತಾ ಕಿರಿಕಿರಿಯಾಗುವಶ್ಟು ಹೆಚ್ಚಿವೆ. ಇದರ ಅವಶ್ಯಕತೆ ಇಲ್ಲಎನ್ನುವುದನ್ನು ಸಂತೋಶ್ ಆನಂದ್ ರಾಮ್ ಅವರು ಮರೆತಿರುವುದು ಅಚ್ಚರಿಯ ವಿಚಾರ. ಇಡೀ ಚಿತ್ರದಲ್ಲಿ ಇದು ಅತಿ ದೊಡ್ಡ ನೆಗೆಟಿವ್ ಎನ್ನಬಹುದು. ಒಬ್ಬ ಹೊಸ ನಟನನ್ನು ಪರಿಚಯಿಸುವಾಗ ಎಲ್ಲವನ್ನು ಸರಿಯಾದ ಹೂರಣ ಮಾಡಬೇಕೇ ಹೊರತು, ಒಮ್ಮೆಲೆ ಆತನ ಮೇಲೆ ಅವಶ್ಯಕತೆಗಿಂತಲೂ ಹೆಚ್ಚಿನದ್ದನ್ನು ಹೊರಿಸಬಾರದು. ಹಾಗೇ ಸಂತೋಶ್ ಆನಂದ್ ರಾಮ್ ಅವರ ಹಿಂದಿನ ಚಿತ್ರಗಳ ಚಾಯೆ ಇಲ್ಲಿ ಕಾಣಿಸುತ್ತದೆ. ಉದಾಹರಣೆಗೆ ತಂದೆ ಹಾಗೂ ಮಗನ ನಡುವಿನ ಬಿಕ್ಕಟ್ಟು, ಇದು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರವನ್ನು ನೆನಪಿಸುತ್ತದೆ. ಏಕೆಂದರೆ ನಾಯಕನ ತಂದೆಯ ಪಾತ್ರದಾರಿ ಅಚ್ಯುತ್ ರಾವ್ ಅವರ ಪಾತ್ರ ಇದನ್ನು ನೆನಪಿಸದೇ ಇರದು.
ಇನ್ನು ಪಾತ್ರವರ್‍ಗಕ್ಕೆ ಬಂದರೆ ಚಿತ್ರರಂಗಕ್ಕೆ ಹೊಸದಾಗಿ ಕಾಲಿಟ್ಟಿರುವ ಗುರು ರಾಜ್‌ಕುಮಾರ್ ಅವರ ಡ್ಯಾನ್ಸ್ ಹಾಗೂ ಪೈಟ್ಸ್ ಚೆನ್ನಾಗಿದೆ. ನಟನೆಯಲ್ಲಿ ಪಕ್ವವಾಗಲು ಇನ್ನೂ ಸ್ವಲ್ಪ ಸಮಯ ಬೇಕು, ಪ್ರತಿಯೊಂದು ದ್ರುಶ್ಯದಲ್ಲೂ ಒಂದೇ ರೀತಿಯ ಮುಕ ಬಾವನೆ ಕಾಣುತ್ತದೆ, ಬಾವನೆಗಳ ವ್ಯಕ್ತಪಡಿಕೆಯಲ್ಲಿ ಪಳಗಬೇಕು. ಇನ್ನು ನಾಯಕಿಯ ಪಾತ್ರದಲ್ಲಿ ಕಾಂತಾರ ಚಿತ್ರದಿಂದ ಹೆಸರುವಾಸಿಯಾದ ಸಪ್ತಮಿ ಗೌಡ ಅವರು ನಟಿಸಿದ್ದು, ನಾಯಕನ ತಂದೆಯಾಗಿ ಅಚ್ಯುತ್ ರಾವ್ ಹಾಗು ತಾಯಿಯಾಗಿ ಸುದಾರಾಣಿ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್, ಹಿತಾ ಚಂದ್ರಶೇಕರ್, ಗೋಪಾಲ್ ಕ್ರಿಶ್ಣ ದೇಶಪಾಂಡೆ ಹಾಗೂ ಇನ್ನಿತರರು ನಟಿಸಿದ್ದಾರೆ. ಕಾಲೇಜು ಪ್ರಾಂಶುಪಾಲರಾಗಿ ಗೋಪಾಲ್ ಕ್ರಿಶ್ಣ ದೇಶಪಾಂಡೆ ಅವರ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಆಶಿಶ್ ಕುಸುಗೊಳ್ಳಿ ಅವರ ಸಂಕಲನವಿದ್ದು, ಬಿ. ಅಜನೀಶ್ ಲೋಕನಾತ್ ಅವರ ಸಂಗೀತ ಹಾಗೂ ಶ್ರೀಶ ಕುಡುವಳ್ಳಿ ಅವರ ಸಿನೆಮಾಟೋಗ್ರಪಿ ಇದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರ 29 ಮಾರ್‍ಚ್ 2024 ರಂದು ತೆರೆಗೆ ಬಂದಿದೆ. ಕುಟುಂಬದ ಜೊತೆ ಕೂತು ಒಮ್ಮೆ ನೋಡಬಹುದಾದ ಚಿತ್ರ ಇದಾಗಿದ್ದು, ಈಗ ಅಮೇಜಾನ್ ಪ್ರೈಮ್ ನಲ್ಲೂ ಸಹ ಬಿಡುಗಡೆಯಾಗಿದೆ.
(ಚಿತ್ರಸೆಲೆ: imdb.com )
ಇತ್ತೀಚಿನ ಅನಿಸಿಕೆಗಳು