ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 5

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 5 ***

ಕೇಳು ಜನಮೇಜಯ ಮಹೀಪತಿ… ನಯವಿಹೀನೆ ಸುದೇಷ್ಣೆ ಪಾಂಚಾಲಿಯನು ಕರೆಸಿದಳು. ಬಂದಾಕೆಯನು ಬೆಸಸಿದಳು.

ಸುದೇಷ್ಣೆ: ಎಲೆಗೆ, ಅನುಜಾಲಯದಲಿ ಉತ್ತಮ ಮಧುವ ನೀ ಝಡಿತೆಯಲಿ ತಹುದು.

(ಎಂದು ಕಡುಪಾಪಿಯ ಮನೋಧರ್ಮವನು ಮೃತ್ಯುವನು ಬಯಸಿದಳು.)

ಸೈರಂಧ್ರಿ: ದೇವಿ. ಅಲ್ಲಿಗೆ ಅಮ್ಮೆನು. ನಿಮ್ಮಯ ತಮ್ಮ ದುರುಳನು. ಲೇಸು ಹೊಲ್ಲೆಹವು ಎಮ್ಮ ತಾಗುವುದು. ಆತನು ಅಳಿದರೆ ಬಳಿಕ ಹಳಿವು ಎಮಗೆ. ನಿಮ್ಮ ನಾವು ಓಲೈಸಿ ನಿಮಗೆ ವಿಕರ್ಮವನು ಮಾಡುವುದು…ನಮಗದು ಧರ್ಮವಲ್ಲ. ಉಳಿದವರ ಕಳುಹುವುದು.

ಸುದೇಷ್ಣೆ: ಸುಡು, ಮನದ ಗರ್ವವ ಏತಕೆ ನುಡಿವೆ. ನಿನ್ನಿಂದ ಎನಗೆ ಮೇಣ್ ಎನ್ನವರಿಗೆ ಹಾನಿ ಹರಿಬಗಳು ಉಂಟೇ. ಅನುಜನು ಆರೆಂದು ಅರಿಯೆ. ಸಾಕು, ಆತನ ಸಮೀಪಕೆ ಹೋಗಿ ಬಾ, ನಡೆ.

(ಎನಲು ಕೈಕೊಂಡು ಅಬಲೆ ನಿಜಾಲಯವ ಹೊರವಂಟಳು…)

ಸೈರಂಧ್ರಿ: (ಕೀಚಕನ ಮನೆಯತ್ತ ಹೋಗುತ್ತ… ತನ್ನಲ್ಲಿಯೇ) ಅರಿಯೆನು ಎಂದೊಡೆ, ದೇವಿ ನೇಮಿಸಲು ಇದಾವ ಧರ್ಮವು. ಶಿವ ಶಿವ ಈ ಹದ, ಅವರಿಗೆ ಸಾವನು ತಹುದು. ಇದು ಬದ್ಧ ವಿಘಾತಿ. ಬಲುಹು ಸೇವಿಸುವದೇ ಕಷ್ಟ ಎಂಬುದು ಕೋವಿದರ ಮತ. ಶಿವ…ಶಿವಾ…ರಾಜೀವಲೋಚನ ಕೃಷ್ಣ ಬಲ್ಲನು.

(ಎನುತ್ತ ಗಮಿಸಿದಳು. ತನ್ನಲ್ಲಿಯೇ…)

ಹರಿ ಹರಿ ಶ್ರೀಕಾಂತ ದಾನವ ಹರ ಮುರಾರಿ ಮುಕುಂದ ಗತಿಶೂನ್ಯರಿಗೆ ನೀನೇ ಗತಿಯೆಲೈ. ಗರುವಾಯಿ ಕೆಟ್ಟೆನಲೈ. ಕುರುಕುಲಾಗ್ರಣಿ ಸೆಳೆದ ವಸ್ತ್ರಾಕರುಷಣದ ಭಯ ಮತ್ತೆ ಬಂದಿದೆ. ಕರುಣಿ, ನೀನೇ ಬಲ್ಲೆ.

(ಎನುತ ಅಬುಜಾಕ್ಷಿ ಅಡಿಯಿಟ್ಟಳು. ಸುರಪ ಶಿಖಿ ಯಮ ನಿರುತಿ ವರುಣ ಆದ್ಯರಿಗೆ ವಂದಿಸಿ, ಕಣ್ಣೆವೆಯ ಬಿಗಿದು ಅರೆಗಳಿಗೆ ನಿಂದು, ಅಂಬುಜಮಿತ್ರನ ಭಜಿಸಿ ಕಂದೆರೆಯೆ, ತರಣಿ ತರುಣಿಗೆ ದೈತ್ಯನ ಮುರಿವ ಕಾಹ ಕೊಟ್ಟನು. ಮಂದ ಮಂದೋತ್ತರದ ಗಮನದೊಳು ಕೀಚಕನ ಮನೆಗೆ ಅಬಲೆ ಬಂದಳು.)

ಪದ ವಿಂಗಡಣೆ ಮತ್ತು ತಿರುಳು

ಮಹೀಪತಿ=ರಾಜ;

ಕೇಳು ಜನಮೇಜಯ ಮಹೀಪತಿ=ವೈಶಂಪಾಯನ ಮುನಿಯು ವ್ಯಾಸರು ರಚಿಸಿದ ಮಹಾ ಬಾರತದ ಕತೆಯನ್ನು ಮತ್ತೊಮ್ಮೆ ಪಾಂಡುವಂಶದ ಅರಸನಾದ ಜನಮೇಜಯನಿಗೆ ಹೇಳತೊಡಗಿದ್ದಾನೆ;

ನಯ=ನೀತಿ/ನ್ಯಾಯ/ವಿವೇಕ; ವಿಹೀನೆ=ಇಲ್ಲದವಳು; ನಯವಿಹೀನೆ=ವಿವೇಕವನ್ನು ಕಳೆದುಕೊಂಡವಳು; ಸುದೇಷ್ಣೆ=ಕೀಚಕನ ಅಕ್ಕ. ವಿರಾಟರಾಯನ ಹೆಂಡತಿ;

ನಯವಿಹೀನೆ ಸುದೇಷ್ಣೆ= “ಕಾಮುಕನಾದ ತನ್ನ ತಮ್ಮ ಕೀಚಕನ ಮನೆಗೆ ಸೈರಂದ್ರಿಯನ್ನು ಕಳುಹಿಸಬಾರದು. ಕಳುಹಿಸಿದರೆ ಅವನಿಂದ ಸೈರಂದ್ರಿಯ ಮಾನಪ್ರಾಣಕ್ಕೆ ಅಪಾಯವಾಗುತ್ತದೆ ” ಎಂಬ ಆತಂಕವಿಲ್ಲದ ಮತ್ತು ಇಂತಹ ನೀಚಕರ‍್ಯಕ್ಕೆ ತಾನು ಅವಕಾಶವನ್ನು ನೀಡಬಾರದು ಎಂಬ ವಿವೇಕವಿಲ್ಲದ ಸುದೇಶ್ಣೆ;

ಪಾಂಚಾಲಿ=ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳು ದ್ರೌಪದಿ;

ಪಾಂಚಾಲಿಯನು ಕರೆಸಿದಳು=ಪಾಂಚಾಲಿಯನ್ನು ತನ್ನ ಬಳಿಗೆ ಕರೆಸಿಕೊಂಡಳು;

ಬಂದ+ಆಕೆಯನು; ಬೆಸಸು=ಅಪ್ಪಣೆ ಮಾಡು;

ಬಂದಾಕೆಯನು ಬೆಸಸಿದಳು=ತನ್ನ ಬಳಿಗೆ ಬಂದ ಸೈರಂದ್ರಿಗೆ ಈ ರೀತಿ ಅಪ್ಪಣೆ ಮಾಡುತ್ತಾಳೆ;

ಎಲೆಗೆ=ಇನ್ನೊಬ್ಬರೊಡನೆ ಮಾತನಾಡುವಾಗ ಬಳಸುವ ಪದ; ತನ್ನ ದಾಸಿಯಾಗಿರುವ ಸೈರಂದ್ರಿಯನ್ನು ಕುರಿತು ಸುದೇಶ್ಣೆಯು ಅದಿಕಾರದ ದನಿಯಲ್ಲಿ ಈ ಪದವನ್ನು ಬಳಸಿದ್ದಾಳೆ; ಅನುಜ+ಆಲಯದಲಿ; ಅನುಜ=ತಮ್ಮ; ಆಲಯ=ಮನೆ; ಮಧು=ಜೇನುತುಪ್ಪ; ಝಡಿತೆ=ಬೇಗ; ತಹುದು=ತರುವುದು;

ಎಲೆಗೆ, ಅನುಜಾಲಯದಲಿ ಉತ್ತಮ ಮಧುವ ನೀ ಝಡಿತೆಯಲಿ ತಹುದು=ಎಲಯ್ ಸೈರಂದ್ರಿ..ನನ್ನ ತಮ್ಮನ ಮನೆಗೆ ಹೋಗಿ ಒಳ್ಳೆಯ ಜೇನುತುಪ್ಪವನ್ನು ತೆಗೆದುಕೊಂಡು ಬೇಗ ಬರುವುದು;

ಎಂದು=ಹೇಳಿ; ಕಡುಪಾಪಿ=ಅತಿ ಹೆಚ್ಚಿನ ಪಾಪವನ್ನು ಮಾಡಿದವನು/ಮಹಾನೀಚ/ಪರಮಕೇಡಿ; ಮನೋಧರ್ಮವನು=ಮನಸ್ಸಿನ ಉದ್ದೇಶ; ಮೃತ್ಯು=ಸಾವು;

ಎಂದು ಕಡುಪಾಪಿಯ ಮನೋಧರ್ಮವನು ಮೃತ್ಯುವನು ಬಯಸಿದಳು= ಪರಮಕೇಡಿಯಾದ ಕೀಚಕನ ಮನಸ್ಸಿನ ಆಸೆಯನ್ನು ಈಡೇರಿಸಲು, ಈ ರೀತಿ ಸೈರಂದ್ರಿಗೆ ಹೇಳುವುದರ ಮೂಲಕ ಸುದೇಶ್ಣೆಯು ಕೀಚಕನ ಸಾವಿಗೆ ತಾನೂ ಕಾರಣಳಾದಳು;

ಅಣ್ಮು>ಅಮ್ಮು; ಅಣ್ಮು=ಶಕ್ತವಾಗು; ಅಮ್ಮೆನು=ಹೋಗುವಶ್ಟು ಶಕ್ತಿಯಿಲ್ಲ;

ದೇವಿ. ಅಲ್ಲಿಗೆ ಅಮ್ಮೆನು=ದೇವಿ, ನಾನು ಅಲ್ಲಿಗೆ ಹೋಗಲಾರೆ.

ದುರುಳ=ನೀಚ/ಕೇಡಿ;

ನಿಮ್ಮಯ ತಮ್ಮ ದುರುಳನು=ನಿಮ್ಮ ತಮ್ಮ ನೀಚನಾಗಿದ್ದಾನೆ;

ಲೇಸು=ಹಿತವಾದುದು/ಒಳ್ಳೆಯದು; ಹೊಲ್ಲೆಹ=ಕೆಟ್ಟದ್ದು/ಕ್ರೂರವಾದುದ್ದು; ಎಮ್ಮ=ನಮ್ಮನ್ನು; ತಾಗುವುದು=ಮುಟ್ಟುವುದು;

ಲೇಸು ಹೊಲ್ಲೆಹವು ಎಮ್ಮ ತಾಗುವುದು=ನೀವು ನನ್ನನ್ನು ಅಲ್ಲಿಗೆ ಕಳುಹಿಸುವುದರಿಂದ ಒಳ್ಳೆಯದಾಗಲಿ ಇಲ್ಲವೇ ಕೇಡಾಗಲಿ ಅದು ನಮ್ಮ ಮೇಲೆ ಪರಿಣಾಮವನ್ನು ಬೀರುತ್ತದೆ;

ಅಳಿ=ನಾಶ/ಸಾವು; ಎಮಗೆ=ನಮಗೆ; ಹಳಿವು=ಆರೋಪ/ನಿಂದೆ/ಕೆಟ್ಟಹೆಸರು;

ಆತನು ಅಳಿದರೆ ಬಳಿಕ ಎಮಗೆ ಹಳಿವು=ಆತ ಸತ್ತರೆ ನಮ್ಮ ಮೇಲೆ ಆರೋಪ ಬರುತ್ತದೆ;

ಓಲೈಸು=ಆಶ್ರಯವನ್ನು ಪಡೆದು ಸೇವೆಯನ್ನು ಮಾಡು; ವಿಕರ್ಮ=ನ್ಯಾಯಸಮ್ಮತವಲ್ಲದ ಕೆಲಸ/ಕೇಡು;

ನಿಮ್ಮ ನಾವು ಓಲೈಸಿ ನಿಮಗೆ ವಿಕರ್ಮವನು ಮಾಡುವುದು ನಮಗದು ಧರ್ಮವಲ್ಲ=ನಿಮ್ಮ ಆಶ್ರಯವನ್ನು ಪಡೆದು ನಿಮ್ಮ ಸೇವೆಯನ್ನು ಮಾಡುತ್ತಿರುವ ನಾವು, ನಿಮ್ಮ ರಾಜಮನೆತನಕ್ಕೆ ಕೇಡನ್ನು ಮಾಡುವುದು ನಮಗೆ ಒಳ್ಳೆಯದಲ್ಲ;

ಉಳಿದವರ ಕಳುಹುವುದು=ರಾಣಿವಾಸದಲ್ಲಿರುವ ದಾಸಿಯರ ಗುಂಪಿನಲ್ಲಿ ಬೇರೆ ಯಾರನ್ನಾದರೂ ನೀವು ಕಳುಹಿಸಿರಿ;

ಸುಡು=ಈ ಸನ್ನಿವೇಶದಲ್ಲಿ ‘ಸುಡು’ ಎಂಬ ಪದ ತಿರಸ್ಕಾರ ಸೂಚಕವಾಗಿ ಬಳಕೆಯಾಗಿದೆ;

ಸುಡು, ಮನದ ಗರ್ವವ ಏತಕೆ ನುಡಿವೆ=ನಿನ್ನ ಮಾತುಗಳನ್ನು ನಾನು ಲೆಕ್ಕಿಸುವುದಿಲ್ಲ. ಸೊಕ್ಕಿನ ಮನದವಳಾದ ನೀನು ಏತಕ್ಕೆ ನನ್ನ ಅಪ್ಪಣೆಯನ್ನು ಕಡೆಗಣಿಸಿ ಮಾತನಾಡುತ್ತಿರುವೆ;

ಮೇಣ್=ಮತ್ತು; ಹಾನಿ=ಕೇಡು; ಹರಿಬ=ತೊಂದರೆ;

ನಿನ್ನಿಂದ ಎನಗೆ ಮೇಣ್ ಎನ್ನವರಿಗೆ ಹಾನಿ ಹರಿಬಗಳು ಉಂಟೇ=ನಿನ್ನಂತಹ ದಾಸಿಯೊಬ್ಬಳಿಂದ ನನಗೆ ಮತ್ತು ನನ್ನವರಿಗೆ ಸಾವು ನೋವಿನ ಕೇಡು ಉಂಟಾಗುವುದೇ;

ಅನುಜನು ಆರೆಂದು ಅರಿಯೆ=ನನ್ನ ತಮ್ಮನು ಯಾರೆಂದು ನಿನಗೆ ಗೊತ್ತಿಲ್ಲ. ನನ್ನ ತಮ್ಮನ ತೋಳ್ಬಲವಾಗಲಿ ಮತ್ತು ಪರಾಕ್ರಮವಾಗಲಿ ಎಂತಹುದು ಎಂಬುದನ್ನು ನೀನು ಕೇಳಿಲ್ಲ… ಕಂಡಿಲ್ಲ;

ಸಾಕು, ಆತನ ಸಮೀಪಕೆ ಹೋಗಿ ಬಾ, ನಡೆ ಎನಲು=ಇನ್ನು ನನ್ನ ಮುಂದೆ ಯಾವ ಸಬೂಬನ್ನು ಹೇಳಬೇಡ. ಆತನ ಬಳಿಗೆ ಹೋಗಿ ಬಾ… ಈ ಕೂಡಲೇ ಹೊರಡು ಎಂದು ಒತ್ತಾಯದಿಂದ ಮತ್ತೆ ಅಪ್ಪಣೆ ಮಾಡಲು;

ಕೈಕೊಂಡು=ರಾಣಿ ಸುದೇಶ್ಣೆಯು ಅಪ್ಪಣೆ ಮಾಡಿದಂತೆ ಕೀಚಕನ ಮನೆಯಿಂದ ಜೇನುತುಪ್ಪವನ್ನು ತರುವುದಕ್ಕೆ ಒಪ್ಪಿಕೊಂಡು;

ಅಬಲೆ=ಹೆಂಗಸು; ನಿಜ+ಆಲಯ; ನಿಜ=ತನ್ನ; ಆಲಯ=ಮನೆ; ನಿಜಾಲಯ=ತಾನು ಕೆಲಸ ಮಾಡುತ್ತಿದ್ದ ರಾಣಿವಾಸದ ಮನೆಯಿಂದ;

ಅಬಲೆ ನಿಜಾಲಯವ ಹೊರವಂಟಳು=ಸೈರಂದ್ರಿಯು ಸುದೇಶ್ಣೆಯ ರಾಣಿವಾಸದಿಂದ ಕೀಚಕನ ಮನೆಯತ್ತ ನಡೆದಳು;

ಅರಿಯೆನು ಎಂದೊಡೆ=ಕೀಚಕನ ಮನೆಗೆ ಹೋಗುವುದಕ್ಕೆ ಆಗುವುದಿಲ್ಲ ಎಂದು ಹೇಳಿದರೂ;

ದೇವಿ ನೇಮಿಸಲು ಇದಾವ ಧರ್ಮವು=ಕೀಚಕನ ಮನೆಗೆ ಹೋಗು ಎಂದು ರಾಣಿಯು ಬಲಾತ್ಕಾರದಿಂದ ಅಪ್ಪಣೆ ಮಾಡಿದ್ದು… ಇದಾವ ನೀತಿ;

ಶಿವ…ಶಿವ=ವ್ಯಕ್ತಿಯು ಸಂಕಟ ಬಂದಾಗ ಆಡುವ ಉದ್ಗಾರದ ನುಡಿ; ಶಿವನೆಂಬ ದೇವರ ಹೆಸರನ್ನು ಉಚ್ಚರಿಸುತ್ತ, ಮನದ ಆತಂಕವನ್ನು ಮತ್ತು ಅಚ್ಚರಿಯನ್ನು ವ್ಯಕ್ತಪಡಿಸುವುದು; ಹದ=ರೀತಿ;

ಶಿವ ಶಿವ ಈ ಹದ, ಅವರಿಗೆ ಸಾವನು ತಹುದು=ದೇವರೇ, ಅಕ್ಕ-ತಮ್ಮ ಸೇರಿಕೊಂಡು ಮಾಡುತ್ತಿರುವ ಈ ರೀತಿಯ ಸಂಚು ಅವರಿಗೆ ಸಾವನ್ನು ತರುವುದು;

ಬದ್ಧ=ತೀವ್ರವಾದ/ಅತಿ ಹೆಚ್ಚಿನ; ವಿಘಾತಿ+ಇದು; ವಿಘಾತಿ=ಕೇಡು/ಹಾನಿ/ನಾಶ;

ಇದು ಬದ್ಧ ವಿಘಾತಿ=ಕೀಚಕನು ನನ್ನ ಮೇಲೆ ಕೆಟ್ಟಕಣ್ಣನ್ನು ಇಟ್ಟಿರುವುದು ಮತ್ತು ಅದಕ್ಕೆ ತಕ್ಕಂತೆ ಸುದೇಶ್ಣೆಯು ಹುನ್ನಾರವನ್ನು ಹೂಡಿರುವುದು ವಿರಾಟರಾಯನ ರಾಜವಂಶಕ್ಕೆ ಹೆಚ್ಚಿನ ಕೇಡನ್ನುಂಟುಮಾಡುತ್ತದೆ;

ಬಲುಹು=ಬಲ/ಶಕ್ತಿ; ಸೇವಿಸು=ಊಳಿಗ/ಚಾಕರಿ; ಕೋವಿದ=ತಿಳಿದವನು/ವಿದ್ವಾಂಸ; ಮತ=ಅಭಿಪ್ರಾಯ/ಅನುಭವದ ಮಾತು;

ಬಲುಹು ಸೇವಿಸುವದೇ ಕಷ್ಟ ಎಂಬುದು ಕೋವಿದರ ಮತ= “ರಾಜಮಹಾರಾಜರ ಇಲ್ಲವೇ ಸಿರಿವಂತರ ಬಳಿ ಊಳಿಗವನ್ನು ಮಾಡುವುದೇ ಬಲು ಕಶ್ಟ” ಎನ್ನುವುದು ತಿಳಿದವರ ಅನುಬವದ ನುಡಿ; ಅದಿಕಾರದಲ್ಲಿರುವವರು ಮತ್ತು ಸಿರಿವಂತರು ತಮ್ಮ ಸೇವೆಯನ್ನು ಮಾಡುವ ದಾಸ ದಾಸಿಯರ ಬಗ್ಗೆ ತುಸುವಾದರೂ ಕರುಣೆಯಿಲ್ಲದೆ ಅವರ ಬದುಕನ್ನು ತಮಗೆ ಇಚ್ಚೆ ಬಂದ ರೀತಿಯಲ್ಲಿ ಯಾವಾಗ ಬೇಕಾದರೂ ಬಲಿತೆಗೆದುಕೊಳ್ಳುತ್ತಾರೆ;

ರಾಜೀವ=ತಾವರೆಯ ಹೂವು; ಲೋಚನ=ಕಣ್ಣು; ರಾಜೀವಲೋಚನ=ತಾವರೆಯಂತಹ ಕಣ್ಣುಳ್ಳವನು/ಸುಂದರ; ಗಮಿಸು=ನಡೆಯುವುದು;

ಶಿವ ಶಿವಾ ರಾಜೀವಲೋಚನ ಕೃಷ್ಣ ಬಲ್ಲನು ಎನುತ್ತ ಗಮಿಸಿದಳು=ದೇವರಾದ ಶಿವನ ಮತ್ತು ಕ್ರಿಶ್ಣನ ಹೆಸರನ್ನು ಉಚ್ಚರಿಸುತ್ತ ಕೀಚಕನ ಮನೆಯತ್ತ ನಡೆದಳು;

ಹರಿ=ವಿಶ್ಣು; ಶ್ರೀಕಾಂತ=ಲಕುಮಿಯ ಗಂಡ ವಿಶ್ಣು; ದಾನವ=ರಕ್ಕಸ; ಹರ=ನಿವಾರಣೆ;

ದಾನವ ಹರ=ರಕ್ಕಸರ ಪೀಡೆಯನ್ನು ನಿವಾರಿಸಿದವನು/ದೇವರು;

ಮುರಾರಿ=ಮುರನೆಂಬ ರಕ್ಕಸನನ್ನು ಕೊಂದ ಕೃಷ್ಣ; ಮುಕುಂದ=ಕೃಷ್ಣ; ಗತಿಶೂನ್ಯರು=ದಿಕ್ಕಿಲ್ಲದವರು/ಆಶ್ರಯವಿಲ್ಲದವರು; ಗತಿ=ದಿಕ್ಕು/ಆಶ್ರಯ;

ಹರಿ ಹರಿ ಶ್ರೀಕಾಂತ ದಾನವ ಹರ ಮುರಾರಿ ಮುಕುಂದ ಗತಿಶೂನ್ಯರಿಗೆ ನೀನೇ ಗತಿಯೆಲೈ=ವಿಶ್ಣು ಮತ್ತು ಕ್ರಿಶ್ಣನ ಹೆಸರನ್ನು ಮತ್ತೆ ಮತ್ತೆ ಸ್ಮರಿಸುತ್ತ… ದಿಕ್ಕಿಲ್ಲದವರ ಪಾಲಿಗೆ ನೀವೇ ದಿಕ್ಕಲ್ಲವೇ ಎಂದು ದೇವರಲ್ಲಿ ಮೊರೆಯಿಡುತ್ತ;

ಗರುವಾಯಿ=ದೊಡ್ಡತನ/ಹಿರಿಮೆ; ಗರುವಾಯಿ ಕೆಡು=ಹಿರಿಮೆಯು ಕುಂದುವುದು;

ಗರುವಾಯಿ ಕೆಟ್ಟೆನಲೈ=ನನ್ನ ಹಿರಿಮೆಗೆ ಕುಂದು ಉಂಟಾಗುವ ಗತಿ ಬಂದಿದೆಯಲ್ಲವೇ;

ಕುರುಕುಲ+ಅಗ್ರಣಿ; ಅಗ್ರಣಿ=ಮುಂದಾಳು;

ಕುರುಕುಲಾಗ್ರಣಿ=ದುಶ್ಶಾಸನ;

ಸೆಳೆ=ಎಳೆ/ಕೀಳು; ವಸ್ತ್ರ+ಆಕರುಷಣ; ವಸ್ತ್ರ=ಬಟ್ಟೆ; ಆರ‍್ಷಣೆ>ಆಕರುಷಣ=ಸೆಳೆಯುವುದು/ಕೀಳುವುದು; ವಸ್ತ್ರಾಕರುಷಣ=ಸೀರೆಯನ್ನು ಕೀಳುವುದು;

ಕುರುಕುಲಾಗ್ರಣಿ ಸೆಳೆದ ವಸ್ತ್ರಾಕರುಷಣದ ಭಯ ಮತ್ತೆ ಬಂದಿದೆ=ಅಂದು ದರ‍್ಯೋದನನ ರಾಜಸಬೆಯಲ್ಲಿ ದುಶ್ಶಾಸನನು ನನ್ನ ಸೀರೆಯ ಸೆರಗಿಗೆ ಕಯ್ಯಿಟ್ಟು ಸೆಳೆದು ಅಪಮಾನ ಪಡಿಸಿದ ರೀತಿಯಲ್ಲಿಯೇ ಇಂದು ಮತ್ತೊಮ್ಮೆ ನಾನು ಕೀಚಕನ ಕಾಮದ ಹಲ್ಲೆಗೆ ಗುರಿಯಾಗಲಿದ್ದೇನೆ ಎಂಬ ಹೆದರಿಕೆಯಾಗುತ್ತಿದೆ;

ಅಬುಜ+ಅಕ್ಷಿ; ಅಬುಜಾಕ್ಷಿ=ತಾವರೆಯ ಕಣ್ಣಿನವಳು/ಸುಂದರಿ; ಅಡಿ+ಇಟ್ಟಳು; ಅಡಿ=ಹೆಜ್ಜೆ;

ಕರುಣಿ ನೀನೇ ಬಲ್ಲೆ ಎನುತ ಅಬುಜಾಕ್ಷಿ ಅಡಿಯಿಟ್ಟಳು=ಕರುಣಿಯಾದ ದೇವರೇ, ನೀನೆ ಎಲ್ಲವನ್ನು ತಿಳಿದಿರುವೆ. ಅಂದರೆ ಈಗ ಬಂದಿರುವ ಆಪತ್ತಿನಿಂದ ನನ್ನನ್ನು ಪಾರುಮಾಡುವ ಬಗೆಯನ್ನು ನೀನೇ ತಿಳಿದಿರುವೆ ಎನ್ನುತ್ತ ಕೀಚಕನ ಮನೆಯತ್ತ ನಡೆದಳು;

ಸುರಪ=ದೇವೇಂದ್ರ; ಶಿಖಿ=ಅಗ್ನಿದೇವ; ಯಮ=ಸಾವಿನ ದೇವತೆ; ನಿರುತಿ=ನೈರುತ್ಯ ದಿಕ್ಕಿನ ದೇವತೆ; ವರುಣ=ನೀರಿನ ದೇವತೆ; ಆದ್ಯರಿಗೆ=ಮೊದಲಾದವರಿಗೆ; ವಂದಿಸಿ=ನಮಸ್ಕರಿಸಿ;

ಸುರಪ ಶಿಖಿ ಯಮ ನಿರುತಿ ವರುಣ ಆದ್ಯರಿಗೆ ವಂದಿಸಿ=ದೇವೇಂದ್ರ, ಅಗ್ನಿದೇವ, ಯಮ, ನಿರುತಿ, ವರುಣ ಮೊದಲಾದ ದೇವತೆಗಳೆಲ್ಲರಿಗೂ ಕಯ್ ಮುಗಿದು;

ಕಣ್+ಎವೆಯ; ಎವೆ=ರೆಪ್ಪೆ;

ಕಣ್ಣೆವೆಯ ಬಿಗಿದು ಅರೆಗಳಿಗೆ ನಿಂದು=ಕಣ್ಣಿನ ರೆಪ್ಪೆಗಳನ್ನು ಮುಚ್ಚಿ, ಅರೆಗಳಿಗೆ ನಿಂತುಕೊಂಡು;

ಅಂಬುಜಮಿತ್ರ=ಸೂರ‍್ಯ; ಭಜಿಸಿ=ಧ್ಯಾನ ಮಾಡಿ; ಕಣ್+ತೆರೆಯೆ;

ಅಂಬುಜಮಿತ್ರನ ಭಜಿಸಿ ಕಂದೆರೆಯೆ=ಸೂರ‍್ಯದೇವನ ಹೆಸರನ್ನು ಉಚ್ಚರಿಸುತ್ತ ಕಣ್ಣನ್ನು ಬಿಡಲು;

ತರಣಿ=ಸೂರ‍್ಯದೇವ; ದೈತ್ಯ=ರಕ್ಕಸ/ಕಾಮಿಯಾದ ಕೀಚಕ; ಮುರಿ=ನಾಶಮಾಡು/ಹಿಮ್ಮೆಟ್ಟಿಸು; ಕಾಹು=ಕಾವಲು;

ತರಣಿ ತರುಣಿಗೆ ದೈತ್ಯನ ಮುರಿವ ಕಾಹ ಕೊಟ್ಟನು=ಸೂರ‍್ಯದೇವನು ಕಾಮಿ ಕೀಚಕನನ್ನು ಸದೆಬಡಿಯುವಂತಹ ಕಾವಲನ್ನು ಸೈರಂದ್ರಿಗೆ ನೀಡಿದನು;

ಮಂದ=ನಿದಾನವಾದ; ಮಂದ+ಉತ್ತರದ; ಮಂದ ಮಂದೋತ್ತರ=ಹೋಗಲೋ ಬೇಡವೋ ಎಂಬಂತೆ ಅತಿ ನಿದಾನವಾಗಿ; ಗಮನ=ನಡೆಯುವುದು;

ಮಂದ ಮಂದೋತ್ತರದ ಗಮನದಲಿ ಕೀಚಕನ ಮನೆಗೆ ಅಬಲೆ ಬಂದಳು=ಮುಂದೇನಾಗುವುದೋ ಎಂಬ ಅಂಜಿಕೆ ಮತ್ತು ಆತಂಕದಿಂದ ಕೂಡಿರುವ ಸೈರಂದ್ರಿಯು ಅತಿ ನಿದಾನಗತಿಯಲ್ಲಿ ಹೆಜ್ಜೆಗಳನ್ನಿಡುತ್ತ ಕೀಚಕನ ಮನೆಯತ್ತ ಬಂದಳು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications