ನಗೆಬರಹ: ಮಾಯವಾದ ಮೀನು!

– .

“ಡ್ರೀಮ್ 11ನಲ್ಲಿ ಒಂದು ಟೀಂ ಮಾಡಿ ಆಟ ಆಡಿ ಹಣ ಗೆಲ್ಲಿರಿ” ಎಂಬ ಆನ್‌ಲೈನ್ ಕ್ರಿಕೆಟ್ ಆಟದ ಜೂಜಿನ ಅಡ್ಡೆಗೆ ಎಳೆದು ತರಲು ನಡೆಯುವ ಕಸರತ್ತು ಅದೆಶ್ಟು ವಿಚಿತ್ರ ನೋಡಿ. ಆಕರ‍್ಶಕ ಜಾಹೀರಾತಿನ ಜೊತೆಗೆ ಕ್ರಿಕೆಟ್ ಆಟದ ದಿಗ್ಗಜರು ತಮ್ಮ ಮಾತುಗಳಿಂದ ಜನರನ್ನು ಆಟದ ಹೆಸರಿನಲ್ಲಿರುವ ಜೂಜಿಗೆ ಸೆಳೆಯುವ ಪರಿ ನಮಗೆ ಸೋಜಿಗವೆನಿಸದಿರದು. ಆ ಜಾಹಿರಾತಿನಲ್ಲೆ “ಆಡುವ ಆಟ ಗೀಳಾಗಿ ಪರಿಣಮಿಸಬಹುದು ಜಾಗರೂಕರಾಗಿರಿ” ಎಂಬ ಎಚ್ಚರಿಕೆಯನ್ನು ಅವರು ಕೊಡಲು ಮರೆಯುವುದಿಲ್ಲ. ಅಂದರೆ ತೊಟ್ಟಿಲು ತೂಗುವವರೆ ಮಗುವನ್ನು ಚಿವುಟಿ ಅಳಿಸುತ್ತಾರೆ ಅಲ್ಲವೇ!?

“ಕುಡಿತದ ಚಟದಿಂದ ಸಂಸಾರ ಹಾಳಾಗುತ್ತದೆ”, “ಹೆಂಡ ಸಾರಾಯಿ ಸಹವಾಸ ಹೆಂಡ್ತಿ ಮಕ್ಕಳ ಉಪವಾಸ” ಮುಂತಾದ ಕುಡಿತದ ಕೆಡುಕುಗಳ ಬಗ್ಗೆ ಸಾಮಾಜಿಕ ಜಾಗ್ರುತಿ ಮೂಡಿಸುವ ಸರ‍್ಕಾರದ ಗೋಶಣೆಗಳು ಅಲ್ಲಲ್ಲಿ ಗೋಡೆ ಬರಹವಾಗಿ ರಾರಾಜಿಸುತ್ತವೆ. ಕುಡಿತದ ಚಟದಿಂದ ದೂರವಿರಿ ಎಂದು ಹೇಳುವ ಸರ‍್ಕಾರವೇ ಮದ್ಯ ತಯಾರಿಸಿ ತನ್ನದೇ ಮಳಿಗೆಯಲ್ಲಿ ಜನರಿಗೆ ಮಾರುತ್ತದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಹಣ ತಂದು ಕೊಡುವ ಈ ಮದ್ಯ ಮಾರಾಟ ಸರ‍್ಕಾರ ನಿಲ್ಲಿಸುತ್ತದೆಯೇ? ಕಂಡಿತ ಇಲ್ಲ. ಮತ್ತೆ ಈ ಸಾಮಾಜಿಕ ಕಳಕಳಿಯ ಗೋಶಣೆಗಳೆಲ್ಲ ಕಣ್ಣು ಒರೆಸುವ ತಂತ್ರ. ಪರೋಕ್ಶವಾಗಿ ಸರ‍್ಕಾರವೇ ಮದ್ಯ ಸೇವಿಸಿ ಎಂದು ಹೇಳುವಾಗ ನಮ್ಮೂರಿನ ತುಕ್ರಣ್ಣ ಸರಾಯಿ ಕುಡಿಯುವುದನ್ನು ಬಿಟ್ಟಾನೇ? ಆತ ಸರಾಯಿ ಕುಡಿಯುವುದಿಲ್ಲ, ಹುಯ್ದುಕೊಳ್ಳುತ್ತಾನೆ.

ನಿನ್ನೆ ಸಾಯಂಕಾಲ ನದಿಯ ಬದಿಯಲ್ಲಿ ಕಟ್ಟಿ ಬಂದ ಹತ್ತಾರು ಕಟ್ಟುಗಾಣಕ್ಕೆ ಸರಿಸರಿಯಾದ ಮೀನುಗಳೆ ಬಿದ್ದಿದ್ದವು. ಬೆಳ್ಳಂಬೆಳಗೆ ನದಿಯ ಕಡೆ ಹೋದ ತುಕ್ರಣ್ಣ ಕಟ್ಟುಗಾಣಕ್ಕೆ ಬಿದ್ದ ಮೀನು ಬಿಡಿಸಿ ಗೋಣಿ ತಾಟಿನಲ್ಲಿ ಸುತ್ತಿ ಸೈಕಲ್ ಕ್ಯಾರಿಯರ್‍‌ನಲ್ಲಿ ಇಟ್ಟುಕೊಂಡು ಗಿರಾಕಿಗೆ ಮಾರಲು ಪೇಟೆ ಕಡೆ ಹೊರಟ. ಹೋಗುವ ಮಾರ‍್ಗ ಮದ್ಯದಲ್ಲಿ ಗುಲಾಬಿ ಸಾರಾಯಿ ಅಡ್ಡೆಯೊಂದಿದೆ, ಆ ಸಾರಾಯಿ ಅಂಗಡಿ ಇನ್ನೂ ತೆರೆದಿಲ್ಲ. ತುಕ್ರಣ್ಣ ಸಾರಾಯಿ ನೆನೆದು ಪಸೆಯಾರಿದ ಬಾಯಿ ನೇರವಾಗಿ ಸಾರಾಯಿ ಅಡ್ಡೆಗೆ ಕರೆದುಕೊಂಡು ಹೋಯ್ತು.

“ಗುಲಾಬಕ್ಕ… ಗುಲಾಬಕ್ಕ…” ಎಂದು ಸರಾಯಿ ಅಂಗಡಿಯ ಬಾಗಿಲು ಜೋರಾಗಿ ತಟ್ಟಿದ. ಒಳಗಿನಿಂದ ಗೊಣಗುತ್ತಲೆ ಬಂದ ಗುಲಾಬಿ “ಏನೋ ತುಕ್ರ… ನಿನಗೆ ಬೆಳಕು ಹರಿಯೋದಕ್ಕೂ ಪುರ‍್ಸೊತ್ತಿಲ್ಲೇನಾ? ಆಗ್ಲೆ ಬಂದು ಅಂಗಡಿ ಬಾಗಿಲು ತಟ್ತಿ?” ಎಂದು ಆಕೆ ಸಿಡಿಮಿಡಿಗೊಂಡಳು. “ಅದೇನೊ ಗುಲಾಬಕ್ಕ, ಬೆಳಿಗ್ಗೆ ಒಂಚೂರು ಹಾಕ್ಲಿಲ್ಲ ಅಂದ್ರೆ ಕೈಕಾಲೆ ಆಡೋದಿಲ್ಲ” ಅಂತ ಆಕೆ ಗ್ಲಾಸಿಗೆ ಹುಯ್ದು ಕೊಟ್ಟಂಗೆ ತುಕ್ರ ಏರಿಸಿದಂಗೆ ಬೆಳಬೆಳಿಗ್ಗೆ ಟೈಟಾಗ್ಬಿಟ್ಟ. “ಬೆಳಿಗ್ಗೆ ನಿಂದೆ ಬೋಣಿ ಕುಡ್ದಿದ್ದಕ್ಕೆ ದುಡ್ಡು ತೆಗಿ” ಅಂತ ಗುಲಾಬಕ್ಕ ಗುಡುಗಿದಾಗ ತುಕ್ರ “ತಡಿಯಕ್ಕ ಇವತ್ತು ಮೀನು ಬಾರೀ ಐತೆ, ಹಿಂಗ್ ಹೋಗಿ ಹಂಗ್ ಮಾರಿ ನಿನ್ನ್ ಸರಾಯಿ ದುಡ್ಡು ಎಣಿಸ್ತೀನಿ” ಅಂದ. ಗುಲಾಬಿಗೆ ಸಿಟ್ಟು ತಡೆಯಲಾಗದೆ “ಬೆಳ್ಳಬೆಳಿಗ್ಗೆ ಎಲ್ಲಿಂದ್ ಬರ‍್ತಿರಾ ನೀವೆಲ್ಲ, ನೀನು ಪುಗಸಟ್ಟೆ ಕುಡ್ದ್ ಹೋದ್ ಮೇಲೆ ಇವತ್ತಿನ ಸಂಜೆತನಕ ಓಸಿ ಗಿರಾಕಿಗಳೇ ಗ್ಯಾರಂಟಿ” ಎಂದು ಶಪಿಸಿದಳು. “ಅಕ್ಕ ಬೇಜಾರು ಮಾಡ್ಕೊಬೇಡಕ್ಕ, ನೋಡು ಬೋಣಿಗೆ ಈ ಮೀನು ಹಿಡ್ಕೋ” ಎಂದು ಗೋಣಿ ತಾಟಿನಿಂದ ಒಂದು ತಾಜಾ ದೊಡ್ಡು ಮೀನು ತೆಕ್ಕೊಟ್ಟು ,”ಉಳಿದ ಬಾಕಿ ಮೀನು ಮಾರಿ ಬಂದು ಕೊಡ್ತೀನಿ” ಎಂದು ತುಕ್ರ ಗಡಂಗಿನಿಂದ ಹೊರಟ.

ಅವನ ಗ್ರಹಚಾರಕ್ಕೆ ಗೋಣಿ ತಾಟಿನಿಂದ ಗುಲಾಬಿಗೆ ಮೀನು ತೆಗೆದುಕೊಟ್ಟ ಮೇಲೆ ಕುಡಿದ ಮತ್ತಿನಲ್ಲಿ ಗೋಣಿ ತಾಟು ಸರಿಯಾಗಿ ಸುತ್ತದೆ ಎತ್ತಿ ಸೈಕಲ್ ಕ್ಯಾರಿಯರ‍್ಗೆ ಸಿಕ್ಕಿಸಿ ತೂರಾಡುತ್ತ, ಇಡಿ ರಸ್ತೆ ಅತ್ತಿಂದಿತ್ತ ಸರ‍್ವೆ ಮಾಡುತ್ತ “ಮೋಕೆದ ಸಿಂಗಾರಿ… ಉಂತುದೇ ವಯ್ಯಾರಿ…” ಹಾಡು ಜೋರಾಗಿ ಗುನುಗುತ್ತ ನಡೆದಿದ್ದ, ಇತ್ತ ಕ್ಯಾರಿಯರ‍್ಗೆ ಸಿಕ್ಕಿಸಿದ್ದ ಮೀನಿನ ಗೋಣಿ ತಾಟು ಸಡಿಲವಾಗಿ ಒಂದೊಂದೆ ಮೀನು ರಸ್ತೆ ಪಾಲಾಗುತಿತ್ತು. ಜನರು ಕೂಗಿ “ಮೀನು ಬೀಳುತ್ತಿದೆ ಮಹರಾಯ ಎತ್ತಿಕೋ” ಎಂದು ಜನ ಕೂಗಿದರೆ, ತನ್ನದೇ ಗುಂಗಿನಲ್ಲೆ ಹೊರಟಿದ್ದ ತುಕ್ರಣ್ಣನಿಗೆ ಅದು ಕೇಳಿಸಲಿಲ್ಲ. ರಸ್ತೆಯುದ್ದಕ್ಕೂ ಬಿದ್ದ ಮೀನು ಕೆಲವು ಜನರ ಪಾಲಾದರೆ ಮತ್ತಶ್ಟು ಬೀದಿ ನಾಯಿ ಪಾಲಾದವು. ತೂರಾಡುತ್ತಲೆ ಪೇಟೆಗೆ ಬಂದ ತುಕ್ರಣ್ಣನ ಕಂಡು ಅವನ ಮಾಮೂಲಿ ಗಿರಾಕಿಗಳು, ತುಕ್ರಣ್ಣ ತಾಜಾ ಮೀನು ತಂದಿರುತ್ತಾನೆ ಎಂದು ಅವನನ್ನು ಮುತ್ತಿದರು. ಆತ ತೂರಾಡುತ್ತಲೆ, ಮೋಟು ಬೀಡಿ ಬಾಯಲ್ಲಿಟ್ಟು ದಮ್ಮು ಎಳೆಯುತ್ತ ತಂದ ಗೋಣಿ ತಾಟು ಬಿಚ್ಚಿದ. ಅದರಲ್ಲೇನಿದೆ…? ಪೂರ‍್ತಿ ಕಾಲಿ! ಜನರು ನಗುತ್ತ “ತುಕ್ರಣ್ಣ ಇವತ್ತು ಮೀನು ಹಿಡ್ಕೊಂಡು ಬಾ ಅಂದ್ರೆ ಒಂದು ದೊಡ್ಡ ಗೋಣಿ ತಾಟೆ ಹಿಂಡ್ಕೊಂಡು ಬಂದ್ಯಾನೆ” ಎಂದು ವ್ಯಂಗ ಮಾಡತೊಡಗಿದರು. “ಅರೆ ಮೀನು ಎಲ್ಲಿ ಹೋಯ್ತು? ಅರೇ… ಮೀನು ಮಾಯ…!” ಎಂದು ಆತ ಕುಡಿದ ಅಮಲಿನಲ್ಲೂ ಯೋಚಿಸಿತೊಡಗಿದ.

“ಓಹೋ ಎಲ್ಲ ಮೀನು ಸಾರಾಯಿ ಅಂಗಡಿ ಗುಲಾಬಕ್ಕನೆ ತಂಗೊಡವ್ವಳೆ” ಎಂದು ನಿರ‍್ದಾರಕ್ಕೆ ಬಂದು ಓಲಾಡುತ್ತಲೇ ತಿರುಗಿ ಗುಲಾಬಕ್ಕನ ಸಾರಾಯಿ ಅಡ್ಡೆಗೆ ಬಂದ. “ಗುಲಾಬಕ್ಕ ನನ್ನ್ ಮೀನು….” ಎಂದು ಕೂಗಿ ಸೈಕಲ್ ದೊಪ್ ಎಂದು ಕೆಡವಿ ತಾನು ಅಲ್ಲೆ ಎಡವಿ ಬಿದ್ದೋನು ಎಚ್ಚರವಾದಾಗ ಸರಿ ರಾತ್ರಿಯಾಗಿದೆ. ಒಂದು ನರಪಿಳ್ಳೆಯ ಸದ್ದು ಇಲ್ಲ, ಕತ್ತಲು ಗುಯ್ ಗುಡುತ್ತಿದೆ ಒಂದೆರಡು ಬೀದಿ ನಾಯಿಗಳು ಒಂದೇ ಸಮನೆ ಬೊಗುಳುತ್ತಿವೆ. ಗುಲಾಬಿಯ ಸರಾಯಿ ಅಂಗಡಿ ಮುಚ್ಚಿದೆ ಎಚ್ಚರಾದ ತುಕ್ರ “ಏ ಗುಲಾಬಕ್ಕ ಸಾರಾಯಿ… ಕೊಡು ಮನೆಗೆ ಹೋದ್ರೆ ಗಿರಿಜಾ ಚಚ್ತಾಳೆ” ಎಂದು ಹಲುಬುತಿದ್ದಾನೆ ಆದರೆ ಅವನ ಹಲುಬುವಿಕೆ ಕೇಳುವವರು ಆ ಸರಿ ರಾತ್ರಿಯಲ್ಲಿ ಅಲ್ಲಿ ಯಾರು ಇಲ್ಲ…!

ಸರ‍್ಕಾರದ ಗೋಡೆ ಬರಹ “ಹೆಂಡ ಸಾರಾಯಿ ಸಹವಾಸ ಹೆಂಡ್ತಿ ಮಕ್ಕಳ ಉಪವಾಸ” ಎಂಬ ವಾಕ್ಯ ಈತನನ್ನೇ ನೋಡಿ ಅಣಕಿಸುತ್ತಿದೆ.

(ಚಿತ್ರ ಸೆಲೆ: copilot.microsoft.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications