ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 6

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 6 ***

ಚಾರು ನೂಪುರ ಝಣಝಣದ ಝೇಂಕಾರ ರವದ ಉಬ್ಬಿನಲಿ ಭವನ ಮಯೂರ ಕುಣಿದವು. ವರಕಟಾಕ್ಷದ ಮಿಂಚು ಥಳಥಳಿಸೆ, ಆರು ಹೊಗಳುವರು ಅಂಗವಟ್ಟದ ಸೌರಭದ ಭಾರಣೆಗೆ ತುಂಬಿಯ ಸಾರ ಕಟ್ಟಿತು. ಕೀಚಕಾಲಯಕೆ ಅಂಗನೆ ಬಂದಳು. ಮನುಮಥನ ಮದದಾನೆ, ಕಂದರ್ಪನ ಮಹಾ ಮಂತಾಧಿದೇವತೆ, ಜನವು ಮರುಳಹ ಮದ್ದು, ಸಂಸೃತಿಸುಖದಸಾಕಾರೆ, ಮನಸಿಜನ ಮಸೆದ ಅಲಗು, ಮುನಿ ಮೋಹನ ತಿಲಕ, ಲಾವಣ್ಯಸಾಗರ ಜನಿತ ಲಕ್ಷ್ಮಿ ಲತಾಂಗಿ ಕೀಚಕನ ಮನೆಗೆ ಬಂದಳು. ಕುಡಿತೆಗಂಗಳ ಚಪಲೆ, ಉಂಗುರವಿಡಿಯ ನಡುವಿನ ನೀರೆ, ಹಂಸೆಯ ನಡೆಯ ನಲವಿನ ಗಮನದ ಮೌಳಿಕಾತಿ, ಪಯೋಜ ಪರಿಮಳದ ಕಡುಚೆಲುವೆ ಬರಲು ಅವನ ತನು ನಡನಡುಗಿ ನಿಂದುದು.

ಕೀಚಕ: (ತನ್ನಲ್ಲಿಯೇ) ಅದಾವ ಹೆಂಗಸು ಪಡೆದಳು ಈ ಚೆಲುವಿಕೆಯನು…

(ಎನುತ ಅಂಗನೆಯ ಈಕ್ಷಿಸಿದನು.ಮತ್ತೆ ತನ್ನಲ್ಲಿಯೇ ಹೇಳಿಕೊಳ್ಳತೊಡಗುತ್ತಾನೆ.)

ಇದು ಅರಿದು ನೆತ್ತರುಗಾಣದ ಅಲಗು; ನೆರೆ ಬಿಗಿಯೆ ಮೈ ಬಾಸುಳೇಳದ ಹುರಿ ಬಲಿದ ನೇಣು; ಸೋಂಕಿದೊಡೆ ಹೊಗೆ ಮಸಗದ ಎದೆಗಿಚ್ಚು. ಅರರೆ ಕಂಗಳ ಧಾರೆ ಯಾವನ ಕೊರಳ ಕೊಯ್ಯದು, ಅದಾವನ ಅರಿಕೆಯ ಹುರುಳುಗೆಡಿಸದು. ಶಿವ… ಶಿವ… ಅದಾವ ನಿಲುವನು. ಆವ ಜನ್ಮದ ಸುಕೃತ ಫಲ ನೆರೆದು ಈ ವಧುವ ಸೇರಿದರೊ ಧನ್ಯರು ತಾವಲಾ. ಬಳಿಕೇನು ಪೂರ್ವದ ಸುಖದ ಸರ್ವಸ್ವ ಭಾವಿಸಲು ಸುಕೃತಾವಳಿಗಳಿಂದ ಈ ವನಿತೆ ಅಲ್ಲಿಂದ ಮೇಣ್ ಇನ್ನಾವುದು ಅತಿಶಯ ಉಂಟು.

(ಎನುತ ಖಳರಾಯನು ಇದಿರೆದ್ದ…)

ಕೀಚಕ: ತರುಣಿ, ಬಾ ಕುಳ್ಳಿರು. ಮದಂತಃಕರಣದ ಎಡರು ಅಡಗಿತ್ತು. ಕಾಮನ ದುರುಳತನಕೆ ಇನ್ನು ಅಂಜುವೆನೆ. ನೀನು ಎನಗೆ ಬಲವಾಗೆ ಇಂದುವಿಗೆ ಮಧುಕರಗೆ ಕೋಗಿಲೆಗೆ ಬಿರುದ ಕಟ್ಟುವೆನು.

(ಎಂದು ಖಳನು ಅಬ್ಬರಿಸಿ ನುಡಿಯಲು, ಇಂದುಮುಖಿ ಖಾತಿಗೊಂಡು ಇಂತು ಎಂದಳು.)

ಸೈರಂಧ್ರಿ: ಬಯಲ ನುಡಿದೊಡೆ ಬಾಯಿ ಹುಳುವುದು. ಎಲವೋ ಕೆಡದಿರು. ನಾಯಿತನ ಬೇಡ. ರಾಯನ ಅಂಗನೆ ಮಧುವ ತರಲೆಂದು ಕಳುಹೆ ಬಂದೆನು. ಸಾಯಬೇಕೇ ಹಸಿದ ಶೂಲವ ಹಾಯಿ ಹೋಗು.

ಕೀಚಕ: ನಿನ್ನ ಬೈಗಳು ತನ್ನನು ನೋಯಿಸುವವೇ…

(ಎನುತವೆ ಸತಿಯ ತುಡುಕಿದನು. ಕರವನು ಒಡೆಮುರುಚಿದಳು. ಬಟ್ಟಲ ಧರೆಯೊಳು ಈಡಾಡಿದಳು. ಸತಿ ಮೊಗದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ ತರಳೆ ಹಾಯ್ದಳು. ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ ವರ ಸಭಾಗ್ಯತೆ ಎನಲು ಸಭೆಗೆ ರಭಸದೊಳು ಓಡಿದಳು.)

ಪದ ವಿಂಗಡಣೆ ಮತ್ತು ತಿರುಳು

ಚಾರು=ಸುಂದರವಾದ; ನೂಪುರ=ಕಾಲಿನ ಗೆಜ್ಜೆ/ಕಾಲಂದುಗೆ; ಝಣಝಣ=ನಡೆಯುವಾಗ ಕಾಲಿಗೆ ಕಟ್ಟಿರುವ ಗೆಜ್ಜೆಗಳಿಂದ ಹೊರಡುವ ದನಿ; ಝೇಂಕಾರ=ನಾದ; ರವ=ದನಿ; ಉಬ್ಬು=ಉಂಟಾಗು/ಹುಟ್ಟು; ಭವನ=ಅರಮನೆ; ಮಯೂರ=ನವಿಲು;

ಚಾರು ನೂಪುರ ಝಣಝಣದ ಝೇಂಕಾರ ರವದ ಉಬ್ಬಿನಲಿ ಭವನ ಮಯೂರ ಕುಣಿದವು=ಕೀಚಕನ ಅರಮನೆಯತ್ತ ಸೈರಂದ್ರಿಯು ಬರುತ್ತಿರುವಾಗ, ಅವಳ ಕಾಲಿನ ಗೆಜ್ಜೆಗಳ ನಾದವನ್ನು ಕೇಳಿ ನವಿಲುಗಳು ಉಲ್ಲಾಸಗೊಂಡು ಕುಣಿಯತೊಡಗಿದವು;

ವರ=ಅನುಗ್ರಹ; ಕಟ+ಅಕ್ಷ; ಕಟ=ಕಡೆ; ಅಕ್ಷಿ=ಕಣ್ಣು; ಕಟಾಕ್ಷ=ಕುಡಿನೋಟ/ಕಡೆಗಣ್ಣಿನ ನೋಟ; ಮಿಂಚು=ಹೊಳಪು/ಕಾಂತಿ; ಥಳಥಳಿಸು=ಪ್ರಕಾಶಿಸು;

ವರಕಟಾಕ್ಷದ ಮಿಂಚು ಥಳಥಳಿಸೆ=ಸೈರಂದ್ರಿಯ ಕಡೆಗಣ್ಣಿನ ನೋಟವು ಪ್ರಕಾಶಿಸುತ್ತಿರಲು;

ಆರು ಹೊಗಳುವರು=ಸೈರಂದ್ರಿಯ ರೂಪದ ಚೆಲುವನ್ನು ಯಾರು ತಾನು ಬಣ್ಣಿಸಲು ಆಗುತ್ತದೆ; ಅಂದರೆ ಆಕೆಯು ಸುರಸುಂದರವಾದ ರೂಪನ್ನು ಹೊಂದಿದ್ದಳು;

ಅಂಗವಟ್ಟ=ಮಯ್ ಕಟ್ಟು/ದೇಹ; ಸೌರಭ=ಕಂಪು/ಪರಿಮಳ; ಭಾರಣೆ=ಹೆಚ್ಚಳ; ಸಾರ=ಮಕರಂದ/ಬಂಡು; ಸಾರ ಕಟ್ಟು=ಮುತ್ತು/ಕವಿ;

ಅಂಗವಟ್ಟದ ಸೌರಭದ ಭಾರಣೆಗೆ ತುಂಬಿಯ ಸಾರ ಕಟ್ಟಿತು=ಸೈರಂದ್ರಿಯ ದೇಹದಿಂದ ಹೊರಹೊಮ್ಮುತ್ತಿರುವ ಸುವಾಸನೆಯನ್ನು ಸವಿಯಲು ದುಂಬಿಗಳು ಸೈರಂದ್ರಿಯ ಮೊಗವನ್ನು ಚುಂಬಿಸಲು ಮುತ್ತಿಕೊಂಡವು;

ಆಲಯ=ಮನೆ; ಅಂಗನೆ=ಹೆಂಗಸು;

ಕೀಚಕಾಲಯಕೆ ಅಂಗನೆ ಬಂದಳು=ಕೀಚಕನ ಮನೆಗೆ ಸೈರಂದ್ರಿಯು ಬಂದಳು;

ಮದದ+ಆನೆ; ಮದ=ಸೊಕ್ಕು;

ಮನುಮಥನ ಮದದಾನೆ=ಮನ್ಮತನ ಸೊಕ್ಕಿದ ಆನೆ; ಈ ನುಡಿಗಟ್ಟು ಒಂದು ರೂಪಕವಾಗಿ ಬಂದಿದೆ. ಮದವೇರಿದ ಆನೆಯು ಅಡಿಯಿಟ್ಟ ಕಡೆಯಲ್ಲೆಲ್ಲ ಗಿಡಬಳ್ಳಿಗಳು ಮುರಿದುಬಿದ್ದು ನೆಲಕಚ್ಚುವಂತೆ, ಸೈರಂದ್ರಿಯ ಬರುವಿಕೆಯಿಂದ ಕೀಚಕನಿಗೆ ಹಾನಿಯುಂಟಾಗಲಿದೆ ಎಂಬುದನ್ನು ಈ ರೂಪಕ ಸೂಚಿಸುತ್ತದೆ;

ಕಂದರ್ಪ=ಮನ್ಮತ/ಮದನ; ಮಂತ್ರ+ಅಧಿ+ದೇವತೆ; ಮಂತ್ರ=ದೇವತೆಗಳನ್ನು ಒಲಿಸಿಕೊಳ್ಳುವುದಕ್ಕಾಗಿ ಹೇಳುವ ನುಡಿಗಳು; ಅಧಿ=ಉತ್ತಮ;

ಕಂದರ್ಪನ ಮಹಾ ಮಂತ್ರಾಧಿದೇವತೆ=ಜೀವಿಗಳ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಮೂಡಿಸುವಂತಹ ಮನ್ಮತನ ದೊಡ್ಡ ಹಾಗೂ ಮುಕ್ಯದೇವತೆ;

ಮರುಳು+ಅಹ; ಮರುಳು=ಮೋಹ; ಅಹ=ಆಗುವ; ಮದ್ದು=ವಶೀಕರಣ ಯಂತ್ರ;

ಜನವು ಮರುಳಹ ಮದ್ದು=ಜನರ ಮಯ್ ಮನದಲ್ಲಿ ಮೋಹವನ್ನು ಕೆರಳಿಸಿ, ತನ್ನತ್ತ ಸೆಳೆಯುವ ವಶೀಕರಣ ಯಂತ್ರ;

ಸಂಸೃತಿ=ಸಂಸಾರ/ಲೋಕದ ಜೀವನ; ಸಾಕಾರೆ=ರೂಪಿಸುವವಳು;

ಸಂಸೃತಿಸುಖದ ಸಾಕಾರೆ=ಸಂಸಾರಸುಕದ ಒಲವು ನಲಿವು ನೆಮ್ಮದಿಯನ್ನು ನೀಡುವವಳು;

ಮನಸಿಜ=ಮನ್ಮತ; ಮಸೆ=ಹರಿತಗೊಳಿಸಲೆಂದು ತಿಕ್ಕು/ಉಜ್ಜು/ತೀಡು; ಅಲಗು=ಬಾಣ;

ಮನಸಿಜನ ಮಸೆದ ಅಲಗು=ಮನ್ಮತನು ಕಾಮಿಗಳನ್ನು ಕೊಲ್ಲಲೆಂದು ಹರಿತಗೊಳಿಸಿರುವ ಚೂಪಾದ ಬಾಣ;

ತಿಲಕ=ಉತ್ತಮವಾದುದು; ಮುನಿ=ರಿಸಿ/ತಪಸ್ವಿ;

ಮುನಿ ಮೋಹನ ತಿಲಕ=ವಿರಾಗಿಗಳಾಗಿರುವ ಮುನಿಗಳ ಮಯ್ ಮನದಲ್ಲಿ ಮೋಹದ ಒಳಮಿಡಿತಗಳನ್ನು ಕೆರಳಿಸುವಂತಹ ಸುಂದರಿ;

ಲಾವಣ್ಯ=ಚೆಲುವು; ಸಾಗರ=ಕಡಲು; ಜನಿತ=ಹುಟ್ಟಿದ; ಲತಾಂಗಿ=ಬಳ್ಳಿಯಂತೆ ಬಳುಕುವ ಅಂಗವನ್ನುಳ್ಳವಳು/ಸುಂದರಿ;

ಲಾವಣ್ಯಸಾಗರ ಜನಿತ ಲಕ್ಷ್ಮಿ ಲತಾಂಗಿ ಕೀಚಕನ ಮನೆಗೆ ಬಂದಳು=ಚೆಲುವಿನ ಕಡಲಿನಲ್ಲಿ ಹುಟ್ಟಿಬಂದ ಲಕ್ಶ್ಮಿಯಂತಹ ಸುಂದರಿಯಾದ ಸೈರಂದ್ರಿಯು ಕೀಚಕನ ಮನೆಗೆ ಬಂದಳು;

ಕುಡಿತೆ+ಕಣ್ಣ್+ಗಳ; ಕುಡಿತೆ=ಬೊಗಸೆ/ವ್ಯಕ್ತಿಯು ತನ್ನೆರಡು ಹಸ್ತಗಳನ್ನು ಜೊತೆಗೂಡಿಸಿದಾಗ ತಳೆಯುವ ಆಕಾರ; ಕುಡಿತೆ+ಕಣ್ಣ್=ಕುಡಿತೆಗಣ್ಣು=ಅಗಲವಾದ ಕಣ್ಣು; ಚಪಲೆ=ತಳಮಳಗೊಂಡಿರುವ ಹೆಂಗಸು;

ಕುಡಿತೆಗಂಗಳ ಚಪಲೆ=ಅಗಲವಾದ ಕಣ್ಣುಳ್ಳ ಸುಂದರಿ;

ಉಂಗುರ+ಪಿಡಿಯ; ಪಿಡಿ=ಸಣ್ಣದು/ಚಿಕ್ಕದು; ನಡು=ಸೊಂಟ;

ಉಂಗುರವಿಡಿಯ ನಡು=ಬಲು ತೆಳ್ಳಗಿರುವ ಸೊಂಟ;

ನೀರೆ=ರೂಪವತಿ/ಸುಂದರಿ;

ಉಂಗುರವಿಡಿಯ ನಡುವಿನ ನೀರೆ=ಬಲು ತೆಳ್ಳನೆಯ ಸೊಂಟವಿರುವ ರೂಪವತಿ;

ನಲವು=ಅಂದ/ಚೆಂದ; ಗಮನ=ನಡಗೆ/ನಡೆಯುವುದು; ಮೌಳಿಕಾತಿ=ನಾಯಕಿ;

ಹಂಸೆಯ ನಡೆಯ ನಲವಿನ ಗಮನದ ಮೌಳಿಕಾತಿ=ಹಂಸ ಪಕ್ಶಿಯ ನಡಗೆಯಂತೆ ಅಂದಚಂದದಿಂದ ಹೆಜ್ಜೆಗಳನ್ನಿಡುತ್ತ ಬರುತ್ತಿರುವ ಸುಂದರಿ;

ಪಯೋಜ=ತಾವರೆಯ ಹೂವು; ಕಡು=ಹೆಚ್ಚಿನ; ತಾವರೆಯ ಪರಿಮಳದ ಕಡುಚೆಲುವೆ=ಇದೊಂದು ರೂಪಕ. ತಾವರೆ ಹೂವಿನ ಪರಿಮಳವು ಸುತ್ತಲೂ ಹರಡಿದಾಗ, ಹೇಗೆ ಆ ವಾತಾವರಣದಲ್ಲಿ ಸೊಗಸು ಕಂಡುಬರುವುದೋ ಅಂತೆಯೇ ರೂಪವತಿಯಾದ ಸೈರಂದ್ರಿಯ ಬರುವಿಕೆಯು ಆ ಜಾಗಕ್ಕೆ ಕಾಂತಿಯನ್ನು ತಂದು ನೀಡಿತು;

ಪಯೋಜ ಪರಿಮಳದ ಕಡುಚೆಲುವೆ ಬರಲು=ಬಲು ಚೆಲುವೆಯಾದ ಸೈರಂದ್ರಿಯು ಕೀಚಕನ ಮನೆಯೊಳಕ್ಕೆ ಬರಲು;

ತನು=ದೇಹ/ಮಯ್;

ಅವನ ತನು ನಡನಡುಗಿ ನಿಂದುದು=ಕೀಚಕನು ಬಲು ಚೆಲುವೆಯಾದ ಸೈರಂದ್ರಿಯು ತನ್ನ ಮನೆಯೊಳಕ್ಕೆ ಬರುತ್ತಿರುವುದನ್ನು ನೋಡನೋಡುತ್ತಿದ್ದಂತೆಯೇ ರೋಮಾಂಚನ, ಅಚ್ಚರಿ ಮತ್ತು ತಲ್ಲಣದಿಂದ ಅವನ ಮಯ್ ಕಂಪಿಸತೊಡಗಿತು;

ತನ್ನಲ್ಲಿಯೇ=ತನ್ನ ಮನದಲ್ಲಿಯೇ ಈ ರೀತಿ ಅಂದುಕೊಳ್ಳತೊಡಗುತ್ತಾನೆ; ಅದು+ಆವ; ಆವ=ಯಾವ; ಚೆಲುವಿಕೆ=ಅಂದ/ಚಂದ/ಸೊಗಸು; ಅಂಗನೆ=ಹೆಣ್ಣು; ಈಕ್ಷಿಸು=ನೋಡು;

ಅದಾವ ಹೆಂಗಸು ಪಡೆದಳು ಈ ಚೆಲುವಿಕೆಯನು ಎನುತ ಅಂಗನೆಯ ಈಕ್ಷಿಸಿದನು=ಯಾವ ಹೆಂಗಸು ತಾನೇ ಇಂತಹ ಚೆಲುವನ್ನು ಪಡೆದಿದ್ದಾಳೆ. ಅಬ್ಬಾ… ಎಲ್ಲರಿಗಿಂತ ಈಕೆಯೇ ಪರಮ ಸುಂದರಿ ಎನ್ನುತ್ತ ಸೈರಂದ್ರಿಯನ್ನು ನೋಡಿದನು;

ಅರಿ=ಕತ್ತರಿಸು; ನೆತ್ತರು+ಕಾಣದ; ನೆತ್ತರು=ರಕ್ತ; ಅಲಗು=ಕತ್ತಿ;

ಇದು ಅರಿದು ನೆತ್ತರುಗಾಣದ ಅಲಗು=ದೇಹವನ್ನು ಕತ್ತರಿಸಿದರೂ ರಕ್ತವು ಕಂಡುಬರದ ಕತ್ತಿಯಿದು.

ನೆರೆ=ಅತಿಶಯ; ಬಿಗಿ=ಕಟ್ಟು; ಬಾಸುಳ್+ಏಳದ; ಬಾಸುಳ್=ಬಾಸುಂಡೆ; ಏಳು=ಉಬ್ಬು; ಬಾಸುಳೇಳದ=ಬಾಸುಂಡೆ ಮೂಡದ; ಹುರಿ=ಹಗ್ಗ; ಬಲಿದ=ಗಟ್ಟಿಯಾಗಿರುವ; ನೇಣು=ಮರಣದಂಡನೆಯನ್ನು ನೀಡುವಾಗ ಕೊರಳಿಗೆ ಹಾಕುವ ಕುಣಿಕೆ;

ನೆರೆ ಬಿಗಿಯೆ ಮೈ ಬಾಸುಳೇಳದ ಹುರಿ ಬಲಿದ ನೇಣು=ಗಟ್ಟಿಯಾದ ಹಗ್ಗದಿಂದ ಕೊರಳನ್ನು ಚೆನ್ನಾಗಿ ಬಿಗಿದು ಕಟ್ಟಿದ್ದರೂ, ಕೊರಳಿನ ಎಡೆಯಲ್ಲಿ ಯಾವುದೇ ಊತ ಕಂಡುಬರದ ನೇಣು;

ಕಿದೊಡೆ=ಸೋಕಿದರೂ/ಆವರಿಸಿಕೊಂಡರೂ; ಹೊಗೆ=ಉರಿಯುತ್ತಿರುವ ಬೆಂಕಿಯಿಂದ ಹೊರಹೊಮ್ಮುವ ಕಪ್ಪನೆಯ ಉರಿ; ಮಸಗು=ಹರಡು/ಹಬ್ಬು; ಎದೆ+ಕಿಚ್ಚು; ಎದೆ=ಮನಸ್ಸು; ಕಿಚ್ಚು=ಬೆಂಕಿ;

ಸೋಂಕಿದೊಡೆ ಹೊಗೆ ಮಸಗದ ಎದೆಗಿಚ್ಚು=ಹೊಗೆ ಸುತ್ತಿಕೊಂಡಿದ್ದರೂ, ಎದೆಯೊಳಗಿನ ಸಂಕಟ ಹೊರನೋಟಕ್ಕೆ ಕಾಣುತ್ತಿರಲಿಲ್ಲ;

ಕತ್ತಿಯಲ್ಲಿ ಕತ್ತರಿಸಿದರೂ ರಕ್ತ ಕಾಣದಿರುವುದು; ನೇಣಿಗೆ ಬಿಗಿದಿದ್ದರೂ ಕೊರಳಲ್ಲಿ ಊತ ಕಾಣದಿರುವುದು; ಹೊಗೆ ಕವಿದಿದ್ದರೂ ಎದೆಯೊಳಗಿನ ಸಂಕಟ ಕಾಣದಿರುವುದು – ಈ ಮೂರು ರೂಪಕಗಳು ಸೈರಂದ್ರಿಯ ಮಯ್ ಕಟ್ಟಿನ ಅಂದಚೆಂದವು ಕೀಚಕನ ಮಯ್ ಮನವನ್ನು ತೀವ್ರವಾಗಿ ಗಾಸಿಗೊಳಿಸಿದ್ದರೂ, ಕೀಚಕನಿಗೆ ಉಂಟಾಗಿರುವ ಕಾಮ ಪರಿತಾಪದ ತೀವ್ರತೆಯು ಅವನಿಗಲ್ಲದೆ ಬೇರೆಯವರಿಗೆ ಗೋಚರಿಸದು ಎಂಬ ತಿರುಳಿನಲ್ಲಿ ಬಳಕೆಗೊಂಡಿವೆ;

ಅರರೆ=ಅಚ್ಚರಿಯನ್ನು ಸೂಚಿಸುವಾಗ ಬಳಸುವ ಪದ; ಕಣ್ಣ್+ಗಳ; ಧಾರೆ=ಕತ್ತಿ ಮೊದಲಾದ ಹತಾರಗಳ ಹರಿತವಾದ ಅಂಚು; ಕಂಗಳ ಧಾರೆ=ಸೈರಂದ್ರಿಯ ಕಣ್ಣುಗಳ ಸುಂದರವಾದ ನೋಟ;

ಅರರೆ ಕಂಗಳ ಧಾರೆ ಯಾವನ ಕೊರಳ ಕೊಯ್ಯದು=ಅಬ್ಬಬ್ಬಾ…ಸೈರಂದ್ರಿಯ ಕಣ್ಣುಗಳ ಸುಂದರವಾದ ನೋಟವು ಯಾವನ ಕೊರಳನ್ನು ತಾನೆ ಕೊಯ್ಯದಿರದು; ಅಂದರೆ ಎಂತಹ ಸಂಯಮಿಯಾಗಿದ್ದರೂ ಇವಳ ಕಣ್ಣೋಟದ ಕಾಂತಿಗೆ ಮರುಳಾಗುತ್ತಾನೆ;

ಅದು+ಆವನ; ಆವನ=ಯಾವನ; ಅರಿಕೆ=ತಿಳುವಳಿಕೆ/ಅರಿವು; ಹುರುಳು+ಕೆಡಿಸದು; ಹುರುಳು=ಶಕ್ತಿ/ಬಲ; ಹುರುಳುಗೆಡಸು=ಬಲಗುಂದಿಸು/ಹಾಳುಮಾಡು;

ಅದಾವನ ಅರಿಕೆಯ ಹುರುಳುಗೆಡಿಸದು=ಸೈರಂದ್ರಿಯ ರೂಪವು ಎಂತಹ ಗಂಡಸಿನ ಅರಿವಿನ ಶಕ್ತಿಯನ್ನಾದರೂ ಕುಂದಿಸದಿರದು; ಅಂದರೆ ಎಂತಹ ಮನೋಬಲವುಳ್ಳವನೂ ಕೂಡ ದುರ್ಬಲ ಮನಸ್ಕನಾಗುತ್ತಾನೆ;

ಅದು+ಆವ; ಆವ=ಯಾವನು;

ಶಿವ ಶಿವ ಅದಾವ ನಿಲುವನು=ಶಿವ… ಶಿವ… ಈಕೆಯ ರೂಪದ ಮುಂದೆ ಸಂಯಮಿಯಾಗಿ ಯಾವನು ತಾನೆ ನಿಲ್ಲಲು ಆಗುತ್ತದೆ; ಅಂದರೆ ಈಕೆಯ ಮಯ್ ಕಟ್ಟಿನ ಅಂದಚೆಂದವನ್ನು ನೋಡಿದ ಯಾವುದೇ ಗಂಡಸು ಕಾಮದ ಒಳಮಿಡಿತಗಳಿಗೆ ಬಲಿಯಾಗದೆ ಇರಲಾರ;

ಸುಕೃತ=ಪುಣ್ಯ/ಭಾಗ್ಯ; ನೆರೆ=ಕೂಡಿ/ಸೇರಿ;

ಆವ ಜನ್ಮದ ಸುಕೃತ ಫಲ ನೆರೆದು ಈ ವಧುವ ಸೇರಿದರೊ=ಈಕೆಯ ಗಂಡಂದಿರು ಹಿಂದಿನ ಯಾವ ಜನ್ಮದಲ್ಲಿ ಗಳಿಸಿದ ಪುಣ್ಯದ ಪಲದಿಂದಾಗಿ ಇಂತಹ ಸುಂದರಿಯನ್ನು ಹೆಂಡತಿಯನ್ನಾಗಿ ಪಡೆದು ಜತೆಗೂಡಿದರೋ;

ಧನ್ಯ=ಪುಣ್ಯವಂತ/ಭಾಗ್ಯಶಾಲಿ;

ಧನ್ಯರು ತಾವಲಾ=ಅವರೆಲ್ಲರೂ ನಿಜಕ್ಕೂ ಪುಣ್ಯವಂತರು;

ಬಳಿಕೇನು=ಇನ್ನೇನು; ವನಿತೆ+ಅಲ್ಲಿಂದ; ವನಿತೆ=ಹೆಂಗಸು; ವನಿತೆಯಲ್ಲಿಂದ=ಈ ಹೆಣ್ಣಿನಿಂದಾಗಿ; ಸುಕೃತ+ಆವಳಿ; ಸುಕೃತ=ಪುಣ್ಯ; ಆವಳಿ=ಸಾಲು/ರಾಶಿ; ಸುಕೃತಾವಳಿ=ಅಪಾರವಾದ ಪುಣ್ಯ; ಮೇಣ್=ಇಲ್ಲವೇ/ಮತ್ತು; ಖಳರಾಯ=ನೀಚನಾದ ವ್ಯಕ್ತಿ/ಕೀಚಕ; ಇದಿರು+ಎದ್ದ; ಇದಿರೆದ್ದ=ಸೈರಂದ್ರಿಯ ಮುಂದೆ ಬಂದು ನಿಂತುಕೊಂಡನು;

ಈ ವನಿತೆಯಲ್ಲಿಂದ ಪೂರ್ವದ ಸುಖದ ಸರ್ವಸ್ವ ಭಾವಿಸಲು ಸುಕೃತಾವಳಿಗಳಿಂದ ಮೇಣ್ ಇನ್ನಾವುದು ಅತಿಶಯ ಉಂಟು ಎನುತ ಖಳರಾಯನು ಇದಿರೆದ್ದ=ಇವಳನ್ನು ಪಡೆದು ಆನಂದಿಸುವಂತಹ ಅಪಾರವಾದ ಪುಣ್ಯಕ್ಕಿಂತ ಅತಿಶಯವಾದುದು ಮತ್ತೊಂದಿಲ್ಲ ಎನ್ನುತ್ತಾ ಕೀಚಕನು ಸೈರಂದ್ರಿಯ ಮುಂದೆ ಬಂದು ನಿಂತುಕೊಂಡನು;

ತರುಣಿ, ಬಾ ಕುಳ್ಳಿರು=ತರುಣಿಯೇ…ಬಾ…ಇಲ್ಲಿ ಕುಳಿತುಕೊ;

ಮತ್+ಅಂತಃಕರಣದ; ಮತ್=ನನ್ನ; ಅಂತಃಕರಣ=ಮನಸ್ಸು; ಎಡರು=ಅಡಚಣೆ/ಅಡ್ಡಿ; ಅಡಗು=ಕೊನೆಗೊಳ್ಳು/ಮುಗಿ;

ಮದಂತಃಕರಣದ ಎಡರು ಅಡಗಿತ್ತು=ನಿನ್ನ ಬರುವಿಕೆಯಿಂದ ನನ್ನ ಮನದ ಆತಂಕ ಕೊನೆಗಂಡಿತು; ಕಾಮನ ದುರುಳತನಕೆ ಇನ್ನು ಅಂಜುವೆನೆ=ಮದನನ ನೀಚತನಕ್ಕೆ ಇನ್ನು ನಾನು ಹೆದರುವುದಿಲ್ಲ. ನಾನು ಮದನನ್ನು ಗೆಲ್ಲುತ್ತೇನೆ. ಅಂದರೆ ನೀನು ಬಂದುದರಿಂದ ನನ್ನ ಮಯ್ ಮನದಲ್ಲಿ ತುಡಿಯುತ್ತಿರುವ ಕಾಮ ತಾಪಕ್ಕೆ ನಾನು ಬಲಿಯಾಗುವುದಿಲ್ಲ;

ಎನಗೆ=ನನಗೆ; ಬಲ=ಬೆಂಬಲ/ನೆರವು/ಸಹಾಯ; ಇಂದು=ಚಂದ್ರ; ಮಧುಕರ=ತುಂಬಿ; ಬಿರುದು ಕಟ್ಟು=ಇದೊಂದು ನುಡಿಗಟ್ಟು. ಸವಾಲು ಹಾಕು/ಸವಾಲು ಎಸೆ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಖಳ=ನೀಚ/ಕೇಡಿ; ಅಬ್ಬರ=ದೊಡ್ಡ ದನಿಯಲ್ಲಿ ಮಾತನಾಡು;

ನೀನು ಎನಗೆ ಬಲವಾಗೆ ಇಂದುವಿಗೆ ಮಧುಕರಗೆ ಕೋಗಿಲೆಗೆ ಬಿರುದ ಕಟ್ಟುವೆನು ಎಂದು ಖಳನು ಅಬ್ಬರಿಸಿ ನುಡಿಯಲು=ನೀನು ನನಗೆ ಒತ್ತಾಸೆಯಾಗಿ ಬಂದರೆ ಈಗ ಯಾವ ಚಂದ್ರ, ತುಂಬಿ ಮತ್ತು ಕೋಗಿಲೆಗಳ ಮೂಲಕ ಮನ್ಮತನು ನನ್ನ ಮಯ್ ಮನವನ್ನು ವಿರಹ ತಾಪಕ್ಕೆ ದೂಡಿದ್ದಾನೆಯೋ ಅವನನ್ನು ಎದುರಿಸಿ ಗೆಲ್ಲುತ್ತೇನೆ ಎಂದು ನೀಚನಾದ ಕೀಚಕನು ಗಟ್ಟಿಯಾದ ದನಿಯಲ್ಲಿ ನುಡಿಯಲು;

ಇಂದುಮುಖಿ=ಚಂದ್ರನ ಬೆಳುದಿಂಗಳಂತೆ ಮೊಗವನ್ನುಳ್ಳವಳು/ಸುಂದರಿ; ಖಾತಿ=ಕೋಪ/ಸಿಟ್ಟು; ಇಂತು=ಈ ರೀತಿ;

ಇಂದುಮುಖಿ ಖಾತಿಗೊಂಡು ಇಂತು ಎಂದಳು=ಕಾಮಿ ಕೀಚಕನ ನುಡಿಗಳನ್ನು ಕೇಳಿ ಕೋಪಗೊಂಡ ಸೈರಂದ್ರಿಯು ಈ ರೀತಿ ನುಡಿದಳು;

ಬಯಲು=ಪ್ರಯೋಜನಕ್ಕೆ ಬಾರದ; ಬಯಲ ನುಡಿ=ಕೆಲಸಕ್ಕೆ ಬಾರದ ಮಾತು/ಕೆಟ್ಟ ಮಾತು;

ಬಯಲ ನುಡಿದೊಡೆ ಬಾಯಿ ಹುಳುವುದು=ಈ ರೀತಿ ಕೆಟ್ಟ ಮಾತುಗಳನ್ನಾಡಿದರೆ ನಿನ್ನ ಬಾಯಲ್ಲಿ ಹುಳ ಬೀಳುತ್ತದೆ;

ನಾಯಿತನ=ಇದೊಂದು ನುಡಿಗಟ್ಟು. ಕೀಳುತನದ ನಡೆನುಡಿ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಎಲವೋ ಕೆಡದಿರು…ನಾಯಿತನ ಬೇಡ=ಎಲವೋ…ನನ್ನೊಡನೆ ಕೀಳುತನದಿಂದ ನಡೆದುಕೊಂಡು ಹಾಳಾಗಬೇಡ;

ರಾಯ=ರಾಜ; ರಾಯನ ಅಂಗನೆ=ವಿರಾಟರಾಜನ ಹೆಂಡತಿಯಾದ ಸುದೇಶ್ಣೆ; ಮಧು=ಜೇನು ತುಪ್ಪ;

ರಾಯನ ಅಂಗನೆ ಮಧುವ ತರಲೆಂದು ಕಳುಹೆ ಬಂದೆನು=ರಾಣಿಯು ನಿನ್ನ ಮನೆಯಿಂದ ಜೇನುತುಪ್ಪವನ್ನು ತೆಗೆದುಕೊಂಡು ಬಾ ಎಂದು ಕಳುಹಿಸಿದ್ದರಿಂದ ಬಂದಿದ್ದೇನೆಯೆ ಹೊರತು ಬೇರೆ ಉದ್ದೇಶ ನನಗಿಲ್ಲ;

ಹಸಿ=ಹೊಸದು; ಶೂಲ=ಚೂಪಾದ ಮೊನೆಯುಳ್ಳ ಹತಾರ/ಈಟಿ/ಮರಣದಂಡನೆಗೆ ಗುರಿಯಾದವರನ್ನು ಕೊಲ್ಲಲು ಬಳಸುವ ಮೊನಚಾದ ತುದಿಯುಳ್ಳ ಕಬ್ಬಿಣದ ಕಂಬ; ಹಸಿದ ಶೂಲ=ಕೊಲ್ಲುವುದಕ್ಕೆಂದೇ ಸಿದ್ದಪಡಿಸಿರುವ ಶೂಲ; ಹಾಯ್=ಮೇಲೆ ಬೀಳು/ನೆಗೆ/ಹಾರು;

ಸಾಯಬೇಕೇ ಹಸಿದ ಶೂಲವ ಹಾಯಿ ಹೋಗು=ಸಾಯಬೇಕೆಂಬ ಬಯಕೆಯಿದ್ದರೆ ಹೋಗಿ ಶೂಲದ ಮೇಲೆ ಬಿದ್ದು ಸಾಯಿ. ಈ ರೀತಿ ನನ್ನನ್ನು ಕೆಟ್ಟಕಣ್ಣಿನಿಂದ ನೋಡಿ ಅಪಮಾನದ ಸಾವನ್ನೇಕೆ ತಂದುಕೊಳ್ಳುವೆ;

ಬೈಗಳು=ನಿಂದನೆಯ ನುಡಿಗಳು/ಶಾಪದ ನುಡಿಗಳು/ತೆಗಳಿಕೆಯ ಮಾತುಗಳು; ಎನುತವೆ=ಎಂದು ಮಾತನಾಡುತ್ತ; ತುಡುಕು=ತಟ್ಟನೆ ಹಿಡಿ/ಮೇಲೆ ಎರಗು;

ನಿನ್ನ ಬೈಗಳು ತನ್ನನು ನೋಯಿಸುವವೇ… ಎನುತವೆ ಸತಿಯ ತುಡುಕಿದನು=ನಿನ್ನ ಶಾಪ ನನಗೆ ತಟ್ಟುವುದಿಲ್ಲ… ನಿನ್ನ ಬಯ್ಗುಳ ನನ್ನನ್ನು ನೋಯಿಸುವುದಿಲ್ಲ ಎನ್ನುತ್ತ, ಸೈರಂದ್ರಿಯನ್ನು ತಟ್ಟನೆ ಹಿಡಿದುಕೊಂಡನು;

ಕರ=ಕಯ್; ಒಡೆ=ಬಿಡಿಸು; ಮುರುಚು=ತಿರುಚು/ನೂಕು/ತಳ್ಳು; ಒಡೆಮುರುಚು=ಕಿತ್ತು ತಿರುಚಿ ದೂರ ತಳ್ಳುವುದು;

ಕರವನು ಒಡೆಮುರುಚಿದಳು=ಕೀಚಕನ ಕಯ್ಗಳನ್ನು ಕಿತ್ತು ತಿರುಚಿ ದೂರ ತಳ್ಳಿದಳು;

ಧರೆ=ನೆಲ; ಈಡಾಡು=ಬಿಸಾಡು;

ಬಟ್ಟಲ ಧರೆಯೊಳು ಈಡಾಡಿದಳು=ಜೇನುತುಪ್ಪವನ್ನು ತೆಗೆದುಕೊಂಡು ಹೋಗಲು ತಂದಿದ್ದ ಬಟ್ಟಲನ್ನು ನೆಲದ ಮೇಲೆ ಬಿಸಾಡಿದಳು;

ಸತಿ=ಹೆಣ್ಣು; ಮೊಗ+ತಿರುಹಿ; ಮೊಗದಿರುಹು=ಮೊಗವನ್ನು ಹಿಂದಕ್ಕೆ ತಿರುಗಿಸುವುದು/ ಕೋಪ ಮತ್ತು ಸಂಕಟದಿಂದ ಮೊಗವನ್ನು ಬೇರೆಡೆಗೆ ತಿರುಗಿಸುವುದು; ಡೆಂಡಣಿಸು=ನಡುಗು/ಕಂಪಿಸು; ತರಳೆ=ತರುಣಿ; ಹಾಯ್=ದಾಟು;

ಸತಿ ಮೊಗದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ ತರಳೆ ಹಾಯ್ದಳು=ಕೀಚಕನ ಕಾಮದ ಹಲ್ಲೆಗೆ ಗುರಿಯಾದ ಸೈರಂದ್ರಿಯು ಕಂಗಾಲಾಗಿ , ಅವನ ಮುಂದೆ ನಿಂತಿದ್ದವಳು ಈಗ ಹಿಂದಕ್ಕೆ ತಿರುಗಿ ಬಾಗಿಲನ್ನು ದಾಟಿ, ಹೆದರಿಕೆಯಿಂದ ಗಡಗಡನೆ ನಡುಗುತ್ತ ಕೀಚಕನ ಮನೆಯಿಂದ ಹೊರಬಂದಳು;

ಜಘನ=ನಿತಂಬ; ಭರ=ಹೊರೆ/ಭಾರ/ತೂಕ; ಬಡನಡು=ತೆಳ್ಳನೆಯ ಸೊಂಟ; ಮುರಿಯದಿಹುದೇ=ಮುರಿಯದಿರುವುದೇ; ವರ=ಉತ್ತಮ/ಒಳ್ಳೆಯ; ಸಭಾಗ್ಯತೆ=ಪುಣ್ಯ;

ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ ವರ ಸಭಾಗ್ಯತೆ ಎನಲು=ಸೈರಂದ್ರಿಯು ಓಡಿಬರುತ್ತಿರುವಾಗ ಅವಳ ಮೊಲೆಗಳ ಬಾರಕ್ಕೆ ಅವಳ ತೆಳ್ಳನೆಯ ಸೊಂಟವು ಮುರಿದುಹೋಗಬೇಕಿತ್ತು; ಆದರೆ ಅಂತಹ ತೊಂದರೆಯಾಗದಿದ್ದುದು ಅವಳ ಪುಣ್ಯವೆಂದೇ ಹೇಳಬೇಕು; ;

ರಭಸ=ವೇಗ;

ಸಭೆಗೆ ರಭಸದೊಳು ಓಡಿದಳು=ಕೀಚಕನ ಮನೆಯಿಂದ ವಿರಾಟರಾಯನ ಒಡ್ಡೋಲಗ ನಡೆಯುತ್ತಿದ್ದ ಅರಮನೆಯತ್ತ ವೇಗವಾಗಿ ಓಡತೊಡಗಿದಳು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications