ಕವಿತೆ: ವಿಶ್ವಪತದ ಕನಸು

.

yamnoue

ವಿದ್ಯೆಗೆ ಬೇಕಿಲ್ಲ ಗೋಡೆಯ ಸಾಲು
ಪರೀಕ್ಶೆಯಲ್ಲ ಎದುರ ಕಟಿಣ ಸವಾಲು
ಬರಿಯ ಪುಸ್ತಕವಲ್ಲ ಬವಿಶ್ಯದ ಕಾವಲು
ಅನುಬವದಿ ಬೆಸೆದ ಅರಿವಿನ ಪಾಲು

ಗೆರೆಗಳ ಕಳೆದ ಬೂಪಟದ ಗ್ನಾನ
ಎಲ್ಲರೂ ನಮ್ಮವರೆ ಮನುಜತ್ವ ತ್ರಾಣ
ವೈರುದ್ಯ ಗೋಡೆಯ ಕೆಡವಿದವ ಜಾಣ
ಬಾವ ಬೆಸೆದರೆ ಬಂದುತ್ವ ಜನನ

ಮೌಡ್ಯತೆ ಕಂದಕದ ಮೇಲೆ ಹಾರಿ
ವಿಗ್ನಾನ ಗ್ನಾನವ ಬೆಳಗಿ ಮೇಲೇರಿ
ವಿಮರ‍್ಶೆ-ತರ‍್ಕ ಒಳನೋಟದಿ ತೂರಿ
ಶೋದಿಸಿ ಬಲವು ನಮಗದೆ ರಹದಾರಿ

ಶಿಕ್ಶಣವು ಕೆಡುಕ ಕೆದಕಿ ಕುಕ್ಕಲಿ
ಒಳಿತ ಮಾತ್ರ ಬೆಳಗಿಸಿ ಮಿನುಗಲಿ
ನದಿ ವಿರಮಿಸದೆ ಸದಾ ಹರಿವಂತೆ
ಚೇತನ ಬತ್ತದಿರಲಿ ಬರಗಾಲದಂತೆ

ನಮ್ಮೊಳಗೆ ನಾವಿಳಿದು ಚಿಂತನೆ ಕಟ್ಟುವ
ವಿಶ್ವಪತದ ಕನಸ ನಾವು ಮುಟ್ಟುವ
ಹಿಂದಿನದ ಸರಿಸಿ ನಾಳೆಗೆ ದುಡಿಯುವ
ಬನ್ನಿ ಸೋದರರೆ ನಾವು ಮುನ್ನಡೆಯುವ

 

(ಚಿತ್ರ ಸೆಲೆ: 8-principles-of-life )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks